ನಾಗ್ಪುರ (ಮಹಾರಾಷ್ಟ್ರ):2019ರ ಲೋಕಸಭೆ ಚುನಾವಣೆಗೂ ಮುನ್ನ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಬಗ್ಗೆ ಅಂದಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ನಿಜವಾದ ಸತ್ಯ ಬೆಳಕಿಗೆ ತಂದಿದ್ದಾರೆ. ಸತ್ಯಪಾಲ್ ಮಲಿಕ್ ಅವರು ಪುಲ್ವಾಮಾ ಸ್ಫೋಟಕ್ಕಿಂತ ದೊಡ್ಡದಾದ ಸ್ಫೋಟಕ ಸತ್ಯವನ್ನು ಹೊರ ಹಾಕಿದ್ದಾರೆ ಎಂದು ಶಿವಸೇನೆಯ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.
ಪುಲ್ವಾಮಾ ದಾಳಿಗೆ ಕಾರಣವಾದ ಲೋಪಗಳ ಬಗ್ಗೆ ಮಾತನಾಡದಂತೆ ತಮಗೆ ಸೂಚಿಸಲಾಗಿತ್ತು ಎಂದು ಸತ್ಯಪಾಲ್ ಮಲಿಕ್ ಅವರು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಕುರಿತು ಮಹಾರಾಷ್ಟ್ರದ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಂಜಯ್ ರಾವತ್, 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಪುಲ್ವಾಮಾ ದಾಳಿ ಬಗ್ಗೆ ಅನೇಕ ಬಾರಿ ಪ್ರಶ್ನೆಗಳು ಎದ್ದಿದ್ದವು. ಆದರೆ, ಇಂತಹ ಪ್ರಶ್ನೆಗಳನ್ನು ಕೇಳುವವರನ್ನು ಪಾಕಿಸ್ತಾನ ಪರವಾಗಿ ಮಾತನಾಡುವ ದೇಶದ್ರೋಹಿಗಳೆಂದು ಬಿಂಬಿಸುವ ಕೆಲಸವಾಗುತ್ತಿತ್ತು. ಈ ದಾಳಿ ಒಂದು ರೀತಿಯ ಹಗರಣ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ:ದೇಶದಲ್ಲಿ 'ಕೈ' ಬಲವರ್ಧನೆಗೆ ಖರ್ಗೆ ರಣತಂತ್ರ: ಪಕ್ಷ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಏಕಕಾಲದಲ್ಲಿ ರೂಪುರೇಷೆ
ಈಗ ಸತ್ಯಪಾಲ್ ಮಲಿಕ್ ಪುಲ್ವಾಮಾ ಘಟನೆ ಬಗ್ಗೆ ಸ್ಫೋಟಕ ಸತ್ಯ ಹೊರ ಹಾಕಿದ್ದಾರೆ. ಇಂದು ಅಧಿಕಾರದಲ್ಲಿ ಕುಳಿತಿರುವ ಕೆಲವರು ಯಾವುದೇ ತಪ್ಪು ಮಾಡಲು ಸಿದ್ಧರಿದ್ದಾರೆ. ರಾಜಕೀಯ ಲಾಭಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಹೆಸರಲ್ಲಿ ಘಟನೆಗಳನ್ನು ಸೃಷ್ಟಿಸುತ್ತಾರೆ. ಬಿಗಿ ಭದ್ರತೆ ಇರುವಾಗ ಸುಮಾರು 300 ಕೆಜಿ ಆರ್‌ಡಿಎಕ್ಸ್ ಪುಲ್ವಾಮಾ ತಲುಪಿದ್ದು ಹೇಗೆ ಎಂದೂ ಸಂಜಯ್ ರಾವತ್ ಪ್ರಶ್ನಿಸಿದರು.