ರೇವಾ (ಮಧ್ಯಪ್ರದೇಶ):ತ್ಯಾಗದ ಸಂಕೇತವಾದ ಬಕ್ರೀದ್ ಅನ್ನು ಗುರುವಾರ ಅಂದರೆ, ಜೂನ್ 29ರಂದು ದೇಶಾದ್ಯಂತ ಆಚರಿಸಲಾಗಿತ್ತು. ಇದಕ್ಕೂ ಒಂದು ದಿನ ಮೊದಲು, ಇಬ್ಬರು ರೇವಾ ನಗರದಲ್ಲಿ ಮೇಕೆಯ ಮೇಲೆ ತಮ್ಮ ಮಾಲೀಕತ್ವದ ಹಕ್ಕು ಸ್ಥಾಪಿಸಲು ಮುಂದಾಗಿದ್ದಾರೆ. ಮೇಕೆ ವಿವಾದ ಬಗೆಹರಿಯದಿದ್ದಾಗ ಎರಡೂ ಕಡೆಯವರಿಂದ ಸಿವಿಲ್ ಲೈನ್ ಠಾಣೆಗೆ ಬಂದು ಪರಸ್ಪರ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು, ಮೇಕೆಯನ್ನು ಠಾಣೆಯ ಹೊರಗೆ ಕಟ್ಟಿಹಾಕಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎರಡೂ ಕಡೆಯಿಂದ ಮೇಕೆಯ ಭಾವಚಿತ್ರ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಲು ಕೇಳಿದ್ದಾರೆ. ಆದರೆ, ಈವರೆಗೂ ಮೇಕೆಯ ನಿಜವಾದ ಮಾಲೀಕ ಪತ್ತೆಯಾಗದ ಕಾರಣ ಇದೀಗ ಈ ಮೇಕೆ ಪೊಲೀಸರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮೇಕೆಯ ನಿಜವಾದ ಮಾಲೀಕರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇಕೆ ಮೇಲೆ ಮಾಲೀಕತ್ವ ವ್ಯಕ್ತಪಡಿಸಿದ ಇಬ್ಬರು:ಪದ್ಮಾಧರ್ ಕಾಲೋನಿ ನಿವಾಸಿ ಸಂಜಯ್ ಖಾನ್ ಅವರು ಸಿವಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. 7ರಿಂದ 8 ತಿಂಗಳ ಹಿಂದೆ ಮನೆಯ ಹೊರಗಿನಿಂದ ಮೇಕೆ ಕಳವಾಗಿತ್ತು ಎಂದು ಸಂಜಯ್ ಖಾನ್ ಹೇಳಿದ್ದಾರೆ. ಮೇಕೆ ಕಳ್ಳತನವಾದ ಬಳಿಕ ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ, ಸಂಜಯ್ ಖಾನ್ ತನ್ನ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದಾಗ, ಘೋಘರ್ ಪ್ರದೇಶದ ಮನೆಯೊಂದರ ಹೊರಗೆ ತನ್ನ ಮೇಕೆ ಕಟ್ಟಿಹಾಕಿರುವುದು ಕಂಡುಬಂದಿದೆ. ಹತ್ತಿರ ಹೋದಾಗ ಸಂಜಯ್ ಖಾನ್ಗೆ ಅದು ತನ್ನ ಮೇಕೆ ಎಂದು ಮನವರಿಕೆಯಾಯಿತು. ಸಂಜಯ್ ಖಾನ್ ಈ ಮೇಕೆ ತನ್ನ ಮನೆಯಲ್ಲಿ ಹುಟ್ಟಿದ್ದು, ಅದರ ಫೋಟೋಗಳು ಸಹ ತನ್ನ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ.