ವಾಷಿಂಗ್ಟನ್ ಡಿಸಿ: ಭಾರತದಲ್ಲಿ ಉದ್ಭವಿಸಿರುವ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಅಮೆರಿಕದಲ್ಲಿ ಭಾರತದ ರಾಯಭಾರಿ ತರಂಜೀತ್ ಸಿಂಗ್ ಸಂಧು ಅವರು ಅಮೆರಿಕದ ಉದ್ಯಮಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಯುಎಸ್ ಚೇಂಬರ್ ಆಫ್ ಕಾಮರ್ಸ್ ಆನ್ಲೈನ್ ಮೂಲಕ ಆಯೋಜಿಸಿದ್ದ ಸಮಾವೇಶದಲ್ಲಿ ಚರ್ಚೆ ನಡೆಸಲಾಯಿತು. ಕೋವಿಡ್ ಚಿಕಿತ್ಸೆಯಲ್ಲಿ ಭಾರತಕ್ಕೆ ತೀರಾ ತುರ್ತಾಗಿ ಬೇಕಾಗಿರುವ ಆಕ್ಸಿಜನ್ ಕಾನ್ಸಂಟ್ರೇಟರ್ಸ್, ಸಿಲಿಂಡರ್, ವೆಂಟಿಲೇಟರ್ಗಳು, ಆಕ್ಸಿಜನ್ ಉತ್ಪಾದನಾ ಪ್ಲಾಂಟ್ಗಳು ಹಾಗೂ ರೆಮ್ಡೆಸಿವಿರ್ ಮತ್ತು ಟೊಸಿಲಿಝುಮಾಬ್ ಔಷಧಗಳ ಬಗ್ಗೆ ಭಾರತದ ರಾಯಭಾರಿಯು ಅಮೆರಿಕದ ಉದ್ಯಮಗಳಿಗೆ ಮಾಹಿತಿ ನೀಡಿದರು.
ಫೈಜರ್ ಕಂಪನಿಯ ಸಿಇಒ ಆಲ್ಬರ್ಟ್ ಬುರ್ಲಾ, ಯುಎಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ಸುಜಾನ್ನೆ ಕ್ಲಾರ್ಕ್ ಮತ್ತು ಯುಎಸ ಸೆನೆಟರ್ ಜೆಫ್ ಮರ್ಕಲೇ ಮುಂತಾದವರೊಂದಿಗೆ ಸಂಧು ಮಾತುಕತೆ ನಡೆಸಿದರು. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತಕ್ಕೆ ಸಹಾಯ ಮಾಡುವಂತೆ ಸಂಧು ಉದ್ಯಮಿಗಳಿಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.