ಚಂಡೀಗಢ(ಪಂಜಾಬ್): ಮರಳು ಮತ್ತು ಜಲ್ಲಿಕಲ್ಲು ಮಾಫಿಯಾ ಮಟ್ಟಹಾಕುವ ನಿಟ್ಟಿನಲ್ಲಿ ಪಂಜಾಬಿನ ಆಮ್ ಆದ್ಮಿ ಪಕ್ಷದ ಸರ್ಕಾರ, ಮರಳು ಮತ್ತು ಜಲ್ಲಿಕಲ್ಲು ಮಾರಾಟ ಕೇಂದ್ರಗಳನ್ನು ಆರಂಭಿಸುತ್ತಿದೆ. ನ್ಯೂ ಚಂಡೀಗಢದ ಇಕೊ ಸಿಟಿ-2 ನಲ್ಲಿ ಇಂದು ರಾಜ್ಯದ ಪ್ರಥಮ ಸರ್ಕಾರಿ ಮರಳು ಮತ್ತು ಜಲ್ಲಿಕಲ್ಲು ಮಾರಾಟ ಕೇಂದ್ರವನ್ನು ಗಣಿ ಮತ್ತು ಭೂವಿಜ್ಞಾನ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಉದ್ಘಾಟಿಸಿದರು.
ಚಂಡೀಗಢದ ಈ ಮರಳು ಮತ್ತು ಜಲ್ಲಿಕಲ್ಲು ಮಾರಾಟ ಕೇಂದ್ರ 2 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಪ್ರತಿ ಘನ ಅಡಿಗೆ 28 ರೂಪಾಯಿ ದರದಲ್ಲಿ ಮರಳು ಮತ್ತು ಜಲ್ಲಿಕಲ್ಲು ಮಾರಾಟ ಮಾಡಲಾಗುವುದು.
ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವ ಹರ್ಜೋತ್ ಸಿಂಗ್ ಬೈನ್ಸ್, ಜನರಿಗೆ ಕೈಗೆಟಕುವ ದರದಲ್ಲಿ ಮರಳು ಮತ್ತು ಜಲ್ಲಿಯನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಇಂಥ ಒಂದು ಮಾರಾಟ ಕೇಂದ್ರವನ್ನು ಶೀಘ್ರದಲ್ಲೇ ತೆರೆಯಲಾಗುವುದು. ಈ ಉಪಕ್ರಮವು ಮರಳು ಮಾಫಿಯಾದ ಹಾವಳಿಯನ್ನು ಮಟ್ಟಹಾಕುವಲ್ಲಿ ಸಹಾಯಕವಾಗಲಿದೆ. ಗಣಿಗಾರಿಕೆಯನ್ನು ಸರ್ಕಾರವು ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ ಗಣಿಗಾರಿಕೆ ಮಾಫಿಯಾದ ದೊಡ್ಡ ಕುಳಗಳನ್ನು ಜೈಲಿಗಟ್ಟಲಾಗಿದೆ ಹಾಗೂ ಅಕ್ರಮ ಗಣಿಗಾರಿಕೆ ನಡೆಸುವವರಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.