ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರದ ಬಿಜೆಪಿ ನಾಯಕಿ ಸನಾ ಖಾನ್ ಕೊಲೆಯಾಗಿ 25 ದಿನಗಳ ಕಳೆದರೂ ಮೃತದೇಹ ಪತ್ತೆಯಾಗಿಲ್ಲ. ಅಲ್ಲದೇ, ಈಕೆಯ ಮೊಬೈಲ್ ಫೋನ್ ಕೂಡ ಸಿಕ್ಕಿಲ್ಲ. ಆದ್ದರಿಂದ ಈ ಪ್ರಕರಣದ ರಹಸ್ಯವನ್ನು ಭೇದಿಸಲು ಪೊಲೀಸ್ ತನಿಖಾ ತಂಡಗಳು ಗೂಗಲ್ ಮೊರೆ ಹೋಗಿವೆ.
ಪೂರ್ವ ಮಹಾರಾಷ್ಟ್ರ ನಗರ ಬಿಜೆಪಿ ಅಲ್ಪಸಂಖ್ಯಾತ ಸೆಲ್ ಕಾರ್ಯಕಾರಿ ಸದಸ್ಯೆಯಾಗಿದ್ದ 34 ವರ್ಷದ ಸನಾ ಖಾನ್ ಆಗಸ್ಟ್ 1ರಂದು ನಾಪತ್ತೆಯಾಗಿದ್ದರು. ಮಧ್ಯಪ್ರದೇಶದ ಜಬಲ್‌ಪುರದ ಅಮಿತ್ ಸಾಹು ಅಲಿಯಾಸ್ ಪಪ್ಪು ಎಂಬಾತನನ್ನು ಮದುವೆಯಾಗಿದ್ದ ಸನಾ ಖಾನ್ ಪತಿಯ ಭೇಟಿಗಾಗಿ ಜಬಲ್ಪುರಕ್ಕೆ ತೆರಳಿದ್ದರು. ಆದರೆ, ಬಳಿಕ ಅಲ್ಲಿಂದ ಕಾಣೆಯಾಗಿದ್ದಾರೆ ಎಂದು ಸನಾ ಖಾನ್ ತಾಯಿ ಮೆಹ್ರುನಿಶಾ ನಾಗ್ಪುರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ನಾಗ್ಪುರ ಹಾಗೂ ಜಬಲ್‌ಪುರ ಪೊಲೀಸರು ಜಂಟಿಯಾಗಿ ತನಿಖೆ ಕೈಗೊಂಡ 10 ದಿನಗಳ ನಂತರ ಸನಾ ಖಾನ್ ಕೊಲೆಯಾಗಿರುವುದು ಬಯಲಾಗಿತ್ತು.
ಅಂತೆಯೇ, ಸನಾ ಖಾನ್ ಪತಿ ಅಮಿತ್ ಸಾಹು ಹಾಗೂ ಜಬಲ್‌ಪುರದ ನಿವಾಸಿಗಳಾದ ರಮೇಶ್ ಸಿಂಗ್ ಮತ್ತು ಧರ್ಮೇಂದ್ರ ಯಾದವ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಆಗ ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಪತಿ ಸನಾ ಖಾನ್ರನ್ನು ಆರ್ಥಿಕ ಮತ್ತು ವೈಯಕ್ತಿಕ ವಿಷಯಗಳಾಗಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದ. ಹತ್ಯೆಯ ನಂತರ ಬೆಲ್ಖೇಡ ಪೊಲೀಸ್ ಠಾಣಾ ವ್ಯಾಪ್ತಿಯ ಮೆರೆಗಾಂವ್ ಗ್ರಾಮದ ಬಳಿಯ ಸೇತುವೆಯಿಂದ ಶವವನ್ನು ಹಿರಾನ್ ನದಿಗೆ ಎಸೆದಿರುವ ಬಗ್ಗೆಯೂ ಮಾಹಿತಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದರು.