ಸೋಪುರ್( ಕಾಶ್ಮೀರ):ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಏಳು ವರ್ಷದ ಬಾಲಕಿ ಸಮಿಯಾ ಮಜೀದ್ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ರಾಜ್ಯ ಮತ್ತು ದೇಶಕ್ಕೆ ಗೌರವ ತಂದಿದ್ದಾಳೆ. ಸಮಿಯಾ ಜಪಾನ್, ನೇಪಾಳ ಮತ್ತು ಬಾಂಗ್ಲಾದೇಶದ ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಚಿನ್ನದ ಪದಕವನ್ನು ಪಡೆದಿದ್ದಾಳೆ.
ಈ ಸಂತಸವನ್ನು ಈಟಿವಿಯೊಂದಿಗೆ ಹಂಚಿಕೊಂಡಿರುವ ಸಮಿಯಾ, ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಚಿನ್ನದ ಪದಕ ಗೆದ್ದಿರುವುದು ಸಾಕಷ್ಟು ಖುಷಿ ತಂದಿದೆ. ಮೊದಲು ನಾನು ನನ್ನ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದೆ. ಆದರೆ, ಕರಾಟೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಈಗ, ನಾನು ಕರಾಟೆ ಟೂರ್ನಿಯಲ್ಲಿ ಯಾರನ್ನಾದರೂ ಸೋಲಿಸಬಲ್ಲೆ ಎಂದು ನಾನು ಭಾವಿಸುತ್ತೇನೆ.
ಒಬ್ಬ ಹುಡುಗಿಯ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಬಾರದು, ಒಂದು ಅವಕಾಶವನ್ನು ಆಕೆಗೆ ನೀಡಿದರೆ, ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಹೊಂದಿದ್ದಾಳೆ ಎಂದಳು. ಇದಕ್ಕೂ ಮೊದಲು, ಸಾಮಿಯಾ ದೇಶದ ಇತರ ಸ್ಥಳಗಳಲ್ಲಿ ನಡೆದ ವಿವಿಧ ಕರಾಟೆ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾಳೆ.
ಸಮಿಯ ಸಾಧನೆಯ ಬಗ್ಗೆ ಮಾತನಾಡಿದ ಆಕೆಯ ಅಕ್ಕ ಅಸ್ಮಾ, ಚಿಕ್ಕ ವಯಸ್ಸಿನಲ್ಲೇ ನನ್ನ ತಂಗಿ ಗಮನಾರ್ಹ ಸಾಧನೆ ಮಾಡಿದ್ದು, ಇದು ನಮಗೆ ಖುಷಿ ತಂದಿದೆ. ಆಕೆಗೆ ನಮ್ಮ ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸಮಿಯಾ ಅವರ ತರಬೇತುದಾರ ಜಿಎಂ ಪಾಲಾ ಮಾತನಾಡಿ, ಸಮಿಯಾ ಪ್ರತಿಭಾವಂತ ಹುಡುಗಿ ಮತ್ತು ಅವರು ಮಾರ್ಷಲ್ ಆರ್ಟ್ಸ್ ಕೌಶಲ್ಯ ಹೆಚ್ಚಿಸುವಲ್ಲಿ ಉತ್ಸುಕರಾಗಿದ್ದರು. ಗೋವಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ, ಹುಡುಗಿಯರನ್ನು ಇತರರಿಗಿಂತ ಕೀಳಾಗಿ ಕಾಣಬಾರದು ಎಂದು ಸಾಬೀತು ಪಡಿಸಿದರು.
ಇದನ್ನೂ ಓದಿ: ವಿಶ್ವ ಪರಂಪರೆಯ ಸಪ್ತಾಹ: ಪ್ರೀತಿಯ ಸ್ಮಾರಕ ತಾಜ್ಮಹಲ್ಗೆ ಉಚಿತ ಪ್ರವೇಶ