ಚೆನ್ನೈ :ಕಳೆದ ವರ್ಷ ವಿವಾದಾತ್ಮಕ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ ಹಲವರನ್ನು ಎನ್‌ಸಿಬಿ ಬಂಧಿಸಿತ್ತು. ಆಗ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಖ್ಯಸ್ಥರಾಗಿದ್ದ, ಭಾರತೀಯ ಕಂದಾಯ ಸೇವಾ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಸೋಮವಾರ ತೆರಿಗೆ ಪಾವತಿದಾರರ ಸೇವಾ ನಿರ್ದೇಶನಾಲಯದ ಪ್ರಧಾನ ನಿರ್ದೇಶಕರನ್ನಾಗಿ ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಸಿಬಿ, ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ನೀಡಿತ್ತು. ಆರ್ಯನ್ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ಆರೋಪಪಟ್ಟಿಯಲ್ಲಿ ಹೇಳಿತ್ತು. ತನಿಖೆಯಲ್ಲಿ ಲೋಪ ಎಸಗಿದ ಮತ್ತು ಪ್ರಕ್ರಿಯೆ ಅನುಸರಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎನ್‌ಸಿಬಿ ಪ್ರಧಾನ ನಿರ್ದೇಶಕರು ತಿಳಿಸಿದ್ದರು. ಸಮೀರ್ ವಾಂಖೆಡೆ ನೇತೃತ್ವದ ಮೊದಲ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಲೋಪಗಳಿವೆ ಎಂದು ಎನ್‌ಸಿಬಿ ಹೇಳಿತ್ತು.