ಮುಂಬೈ(ಮಹಾರಾಷ್ಟ್ರ):ಹೈ-ಪ್ರೊಫೈಲ್ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಿಡುಗಡೆಗಾಗಿ 25 ಕೋಟಿ ರೂಪಾಯಿ ಲಂಚದ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ, ತನಗೆ ಬೆದರಿಕೆ ಕರೆ, ಸಂದೇಶಗಳು ಬರುತ್ತಿವೆ ಎಂದು ಸೋಮವಾರ ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಾಂಖೆಡೆ, ತಮ್ಮ ಜೀವಕ್ಕೆ ಅಪಾಯವಿದೆ. ಕಳೆದ ನಾಲ್ಕು ದಿನಗಳಿಂದ ತಮಗೆ ಬೆದರಿಕೆಗಳು ಬರುತ್ತಿವೆ. ಎಲ್ಲಾ ವಿವರಗಳನ್ನು ಪೊಲೀಸ್ ಆಯುಕ್ತರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಸಮೀರ್ ವಾಂಖೆಡೆ ಹೇಳಿದ್ದಾರೆ. 25 ಕೋಟಿ ರೂಪಾಯಿ ಲಂಚ ಪ್ರಕರಣದ ವಿಚಾರಣೆಗಾಗಿ ಬಾಂಬೆ ಹೈಕೋರ್ಟ್‌ಗೆ ಆಗಮಿಸಿದ ನಂತರ ಅವರು ಈ ಹೇಳಿಕೆಗಳನ್ನು ನೀಡಿದ್ದು ಮಹತ್ವ ಪಡೆದುಕೊಂಡಿದೆ.
ಅಶ್ಲೀಲ ಸಂದೇಶ ರವಾನೆ:ತನ್ನ ಪತ್ನಿ ಮತ್ತು ತನಗೆ ಆಗಂತುಕರಿಂದ ಬೆದರಿಕೆ ಕರೆಗಳು ಬರುತ್ತಿವೆ. ನಾವು ಬಳಸುವ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶಗಳನ್ನು ರವಾನಿಸಲಾಗುತ್ತಿದೆ. ನಮಗೆ ಜೀವ ಹಾನಿಯಾಗುವ ಬೆದರಿಕೆ ಇರುವ ಕಾರಣ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ವಿಶೇಷ ಭದ್ರತೆ ನೀಡಲು ಒತ್ತಾಯಿಸುವೆ ಎಂದು ಹೇಳಿದ್ದಾರೆ.
ಬಂಧನದಿಂದ ರಿಲೀಫ್:ಇನ್ನೂ, ಲಂಚ ಕೇಳಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಾಂಖೆಡೆ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿದೆ. ಬಂಧನ ಭೀತಿ ಹೊಂದಿದ್ದ ಸಮೀರ್ ವಾಂಖೆಡೆ ಇದರ ವಿರುದ್ಧ ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್, ಜೂನ್ 8 ರವರೆಗೆ ಬಂಧಿಸಿದಂತೆ ಆದೇಶ ನೀಡಿದೆ. ಇದರಿಂದ ಸಿಬಿಐ ಬಂಧನದಿಂದ ಸಮೀರ್ ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ.
ನ್ಯಾಯಾಲಯದಲ್ಲಿ ವಾದವೇನು?:ಶಾರೂಖ್ ಪುತ್ರನ ಬಿಡುಗಡೆಗಾಗಿ ಲಂಚ ಕೇಳಿದ್ದು ಸುಳ್ಳು. ಯಾವುದೇ ಭ್ರಷ್ಟಾಚಾರ ಎಸಗಿಲ್ಲ. ತಮ್ಮ ವಿರುದ್ಧದ ಆರೋಪದ ತನಿಖೆಗೆ ಸಹಕರಿಸಲಾಗುವುದು ಎಂದು ಸಮೀರ್ ವಾಂಖೆಡೆ ಅವರ ಪರ ವಕೀಲರು ಹೈಕೋರ್ಟ್ನಲ್ಲಿ ವಾದಿಸಿದರು. ಬಂಧಿಸದಿದ್ದರೆ ಸಾಕ್ಷ್ಯಾಧಾರ ನಾಶ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ತನಿಖೆಯ ಹಾದಿ ತಪ್ಪಲಿದೆ ಎಂದು ಸಿಬಿಐ ವಾದಿಸಿತು. ವಾದ ಆಲಿಸಿದ ಬಾಂಬೈ ಹೈಕೋರ್ಟ್ನ ಪೀಠ, ಸದ್ಯಕ್ಕೆ ಸಮೀರ್ ವಾಂಖೆಡೆ ಅವರನ್ನು ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಆದೇಶಿಸಿತು.
ಈ ಹಿಂದೆಯೂ ಆರ್ಯನ್ ಖಾನ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮಾಜಿ ಅಧಿಕಾರಿ ಸಮೀರ್ ವಾಂಖೇಡೆ ಅವರು ಬಾಂಬೆ ಹೈಕೋರ್ಟ್ನಿಂದ ರಿಲೀಫ್ ಪಡೆದಿದ್ದರು. ವಾಂಖೆಡೆ ವಿರುದ್ಧ ಮೇ 22 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸಿಬಿಐಗೆ ಹೈಕೋರ್ಟ್ ಸೂಚಿಸಿತ್ತು. ಇಂದು ನಡೆದ ವಿಚಾರಣೆಯಲ್ಲೂ ವಾಂಖೆಡೆ ರಿಲೀಫ್ ಪಡೆದಿದ್ದಾರೆ.
ಓದಿ:ಆರ್ಯನ್ ಖಾನ್ ಡ್ರಗ್ ಪ್ರಕರಣ: ಸಿಬಿಐ ಮುಂದೆ ಹಾಜರಾಗುವಾಗ ಸತ್ಯಮೇವ ಜಯತೆ ಎಂದ ಸಮೀರ್ ವಾಂಖೆಡೆ... 5 ಗಂಟೆ ವಿಚಾರಣೆ