ನವದೆಹಲಿ: ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಂಚನೆ ಆರೋಪ ಕೇಳಿಬಂದ ಬೆನ್ನಲ್ಲೇ ಇಂದು ಅವರು ದೆಹಲಿಯಲ್ಲಿರುವ ಎನ್‌ಸಿಬಿ ಕಚೇರಿಗೆ ಬಂದಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಸಮನ್ಸ್ ಬಂದಿಲ್ಲ. ನಾನು ಬೇರೆ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದೇನೆ, ನನ್ನ ಮೇಲಿನ ಎಲ್ಲಾ ಆರೋಪಗಳು ಆಧಾರರಹಿತ ಎಂದು ಹೇಳಿದರು. ಇತ್ತ ದೆಹಲಿಯ ಎನ್‌ಸಿಬಿ ಕಚೇರಿ ಮುಂದೆ ಸಮೀರ್ ವಾಂಖೆಡೆ ಅವರನ್ನು ಬೆಂಬಲಿಸಿ ಹಿಂದೂ ಸೇನೆ ಹಾಕಿದ್ದ ಪೋಸ್ಟರ್‌ಗಳನ್ನು ಎನ್‌ಸಿಬಿ ಅಧಿಕಾರಿಗಳು ತೆಗೆದುಹಾಕಿದ್ದಾರೆ.
ಇದನ್ನೂ ಓದಿ: Mumbai Drugs case: ಸಮೀರ್ ವಾಂಖೆಡೆ ವಿರುದ್ಧ ವಿಚಕ್ಷಣಾ ತನಿಖೆಗೆ ಆದೇಶಿಸಿದ ಎನ್‌ಸಿಬಿ
ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಎದುರಿಸುತ್ತಿರುವ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ಸಮೀರ್ ವಾಂಖೆಡೆ ನಡೆಸುತ್ತಿದ್ದಾರೆ. ಇವರ ವಿರುದ್ಧ ಪ್ರಭಾಕರ್ ಸೈಲ್ ಎಂಬುವರು ಲಂಚದ ಆರೋಪ ಹೊರಿಸಿದ್ದಾರೆ. ಶಾರೂಖ್ ಖಾನ್ ಪುತ್ರನನ್ನು ಬಿಟ್ಟು ಬಿಡಲು 25 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದ್ದು, ಇದರಲ್ಲಿ 8 ಕೋಟಿ ರೂ.ವಾಂಖೆಡೆಗೆ ನೀಡಬೇಕು ಎಂಬ ಒಪ್ಪಂದವಾಗಿದೆ ಎಂದು ಆರೋಪಿಸಿದ್ದರು.
ವಾಂಖೆಡೆ ಅವರನ್ನು ಬೆಂಬಲಿಸಿ ಹಿಂದೂ ಸೇನೆ ಹಾಕಿದ್ದ ಪೋಸ್ಟರ್‌ಗಳನ್ನು ತೆಗೆದುಹಾಕಿದ ಎನ್‌ಸಿಬಿ ಅಧಿಕಾರಿಗಳು ಬಳಿಕ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ವಾಂಖೆಡೆ ವಿರುದ್ಧ ಆರೋಪಗಳ ಸುರಿಮಳೆ ಗೈಯ್ಯಲು ಶುರು ಮಾಡಿದ್ದಾರೆ. 26 ಪ್ರಕರಣಗಳ ತನಿಖೆಯನ್ನು ವಾಂಖೆಡೆ ಸರಿಯಾಗಿ ಮಾಡಿಲ್ಲ ಎಂದು ನನಗೆ ಪತ್ರಗಳು ಬಂದಿವೆ ಎಂದ ಮಲಿಕ್, ವಾಂಖೆಡೆಯ ಧರ್ಮ, ಜನನ ಪ್ರಮಾಣಪತ್ರದವರೆಗೂ ಆರೋಪ ಮಾಡಿದ್ದರು. ಅಲ್ಲದೇ ಬಾಲಿವುಡ್ ತಾರೆಯರಿಂದ ಹಣ ಪಡೆಯಲು ಸಮೀರ್ ವಾಂಖೆಡೆ ದುಬೈ ತೆರಳಿದ್ದರು ಎಂದೂ ಹೇಳಿದ್ದರು.
ಇದನ್ನೂ ಓದಿ: ಬಾಲಿವುಡ್ ತಾರೆಯರಿಂದ ಹಣ ಪಡೆಯಲು ಸಮೀರ್ ವಾಂಖೆಡೆ ದುಬೈ ತೆರಳಿದ್ದರು: ನವಾಬ್ ಮಲಿಕ್ ಆರೋಪ
ನಿನ್ನೆ ಮುಂಬೈ ಸೆಷನ್ ನ್ಯಾಯಾಲಯದ ವಿಶೇಷ ಎನ್‌ಡಿಪಿಎಸ್ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ವಾಂಖೆಡೆ, ನಾನು ನನ್ನ ವೃತ್ತಿಜೀವನದಲ್ಲಿ ಯಾವತ್ತೂ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಬಂದಿರುವ ಎಲ್ಲಾ ಆರೋಪಗಳು ಸುಳ್ಳು. ನಾನು ಯಾವುದೇ ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ. ಕೆಲವರು ನನ್ನನ್ನು, ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ನನ್ನ ಕೆಲವು ವೈಯಕ್ತಿಕ ಫೋಟೋಗಳು ಸೋರಿಕೆಯಾಗಿವೆ ಎಂದು ಹೇಳಿದ್ದರು.