ನವದೆಹಲಿ:ಸಲಿಂಗ ವಿವಾಹ ಮತ್ತು ಲಿವಿಂಗ್ ಟುಗೆದರ್ ಭಾರತೀಯ ಕೌಟುಂಬಿಕ ಪರಿಕಲ್ಪನೆಯ ವಿರುದ್ಧವಾಗಿದೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್, ಈ ರೀತಿಯ ಸಂಬಂಧಗಳನ್ನು ಕುಟುಂಬ ವ್ಯಾಪ್ತಿಗೆ ತರಲಾಗುವುದಿಲ್ಲ ಎಂದು ಹೇಳಿದೆ. ಅಲ್ಲದೇ, ಪ್ರಕರಣವನ್ನು ಪಂಚಪೀಠದ ಮುಂದೆ ವಿಚಾರಣೆ ನಡೆಸಬೇಕು ಎಂದು ಸೂಚಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಅರ್ಜಿಗಳ ವಿರುದ್ಧ ವಾದ ಮಂಡಿಸಿದ ಕೇಂದ್ರ ಸರ್ಕಾರ ಈ ರೀತಿಯ ವ್ಯವಸ್ಥೆಗೆ ಅನುಮತಿ ನೀಡಿದಲ್ಲಿ ಭಾರತೀಯ ಕುಟುಂಬ ವ್ಯವಸ್ಥೆಗೆ ಧಕ್ಕೆ ಬರಲಿದೆ. ವಿವಾಹ ಪರಿಕಲ್ಪನೆಯೇ ಅರ್ಥ ಕಳೆದುಕೊಳ್ಳಲಿದೆ ಎಂದು ಪ್ರಬಲ ವಾದ ಮಂಡಿಸಿತು.
ಮದುವೆ ಎಂಬುದು ವಿರುದ್ಧ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ಹೊಂದಾಣಿಕೆಯನ್ನು ಸೂಚಿಸುತ್ತದೆ. ಈ ಕಲ್ಪನೆಗೆ ಕೋರ್ಟ್ನ ಹೊಸ ವ್ಯಾಖ್ಯಾನದಿಂದ ತೊಂದರೆಗೊಳಗಾಗಬಾರದು ಅಥವಾ ದುರ್ಬಲಗೊಳಿಸಬಾರದು. ಮದುವೆಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ಮತ್ತು ಶಾಸನಬದ್ಧ ಕಾನೂನುಗಳು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಗುರುತಿಸುತ್ತವೆ ಎಂದು ಸರ್ಕಾರ ವಾದಿಸಿತು.
ಕಾನೂನು ರಚನೆ ಶಾಸಕಾಂಗಕ್ಕೆ ಬಿಡಬೇಕು:ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆ, ಬೇಡವೇ ಎಂಬುದನ್ನು ಶಾಸಕಾಂಗಕ್ಕೆ ಬಿಡಬೇಕು. ಸಮಾಜ ಮತ್ತು ಮಕ್ಕಳ ಮೇಲೆ ಸಾಮಾಜಿಕ, ಮಾನಸಿಕ ಮತ್ತು ಇತರ ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ಶಾಸಕಾಂಗ ನಿರ್ಧಾರ ತೆಗೆದುಕೊಳ್ಳುವಾಗ ಕಾನೂನುಬದ್ಧ ಹಿತಾಸಕ್ತಿಗಳನ್ನು ಪರಿಗಣಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಲಿಂಗ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದು, ಸಹಜೀವನ ನಡೆಸುವುದು ಅಪರಾಧವಲ್ಲದಿದ್ದರೂ, ಅದು ಪತಿ, ಪತ್ನಿ ಮತ್ತು ಮಕ್ಕಳನ್ನು ಒಳಗೊಂಡ ಭಾರತೀಯ ಕುಟುಂಬ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ. ಇದು ಜೈವಿಕ ವ್ಯವಸ್ಥೆಯನ್ನೇ ಪ್ರಶ್ನಿಸಿದಂತಾಗುತ್ತದೆ. ಪುರುಷ 'ಗಂಡ'ನಾದರೆ, ಮಹಿಳೆ 'ಹೆಂಡತಿ'ಯಾಗಿ ಮತ್ತು ಇಬ್ಬರ ನಡುವಿನ ಸಂಬಂಧದಿಂದ ಜನಿಸಿದ ಮಕ್ಕಳು ಕುಟುಂಬ ವ್ಯವಸ್ಥೆಯ ಆಧಾರ. ಪುರುಷ ತಂದೆ ಮತ್ತು ಮಹಿಳೆ ತಾಯಿಯಾಗಿ ಅವರನ್ನು ಪೋಷಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್ನಲ್ಲಿ ಸಮರ್ಥಿಸಿಕೊಂಡಿದೆ.
ಸಲಿಂಗ ವಿವಾಹಕ್ಕೆ ಅನುಮತಿ ನೀಡದಿರುವುದು ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಂತಾಗುವುದಿಲ್ಲ. ಭಿನ್ನಲಿಂಗೀಯ ವಿವಾಹಗಳಿಗೆ ಸಮಾಜದಲ್ಲಿ ಪ್ರೋತ್ಸಾಹವಿದೆ. ಆದರೆ, ಸಲಿಂಗ ವಿವಾಹದಲ್ಲಿ ಸಾಮಾಜಿಕ ಸ್ಥಿರತೆ ಇರುವುದಿಲ್ಲ. ಹೀಗಾಗಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಅನಿವಾರ್ಯವಾಗುವುದಿಲ್ಲ ಎಂದು ಸರ್ಕಾರ ವಾದಿಸಿತು.
ಲಿಂಗ ಆಧಾರದ ತಾರತಮ್ಯವಲ್ಲ:ಸಲಿಂಗ ವಿವಾಹವನ್ನು ಪರಿಗಣಿಸದೇ ಇರುವುದು ಲಿಂಗ ತಾರತಮ್ಯ ಮಾಡಿದಂತಾಗುವುದಿಲ್ಲ. ಭಿನ್ನ ಲಿಂಗಿಗಳು ಮಾತ್ರ ವೈವಾಹಿಕ ಜೀವನದ ಅಡಿಪಾಯವಾಗಿದ್ದಾರೆ. ಸಲಿಂಗಗಳು ಕುಟುಂಬ ವ್ಯವಸ್ಥೆಯ ವಿರುದ್ಧವಾಗಿದ್ದಾರೆ. ಅವರ ಸಹಜೀವನ ಸಾಮಾಜಿಕ ಸ್ವಾಸ್ಥ್ಯಕ್ಕೆ ತಕ್ಕುದಲ್ಲ. ಭಿನ್ನಲಿಂಗೀಯ ವಿವಾಹದಂತಹ ಸ್ಥಾನಮಾನವನ್ನು ಬೇರೆ ಯಾವುದೇ ರೀತಿಯ ಸಹಜೀವನವು ಸರಿ ಹೊಂದುವುದಿಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿತು.
ಸರ್ಕಾರದ ವಾದದ ಬಳಿಕ, ಸಲಿಂಗ ಸಂಬಂಧದಲ್ಲಿ ಒಟ್ಟಿಗೆ ವಾಸಿಸುವ ವ್ಯಕ್ತಿಗಳನ್ನು ಭಾರತೀಯ ಕುಟುಂಬದ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತು. ಕುಟುಂಬ ವ್ಯವಸ್ಥೆ ಪತಿ, ಪತ್ನಿ ಮತ್ತು ಜನಿಸಿದ ಮಕ್ಕಳ ಒಕ್ಕೂಟವಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ಸಲಿಂಗ ವಿವಾಹವನ್ನು ಪ್ರತಿಪಾದಿಸುವ ಅರ್ಜಿಗಳನ್ನು ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠದ ಮುಂದೆ ವಿಚಾರಣೆ ನಡೆಸಬೇಕು ಎಂದು ಪ್ರಕರಣವನ್ನು ವರ್ಗಾಯಿಸಿತು. ಏಪ್ರಿಲ್ 18 ರಿಂದ ಸಾಂವಿಧಾನಿಕ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯಲಿದೆ.
ಓದಿ:ಹಳೆಯ 5 ಪೈಸೆ ನಾಣ್ಯಕ್ಕೆ ಅರ್ಧ ಕೆಜಿ ಚಿಕನ್: ಅಂಗಡಿಯ ಆಫರ್ ಕಂಡು ಮುಗಿಬಿದ್ದ ಜನರು!