ಸೋನಿಪತ್(ಹರಿಯಾಣ):ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮಹತ್ವದ ಸಭೆ ನಡೆಸಲಿದೆ. ಡಿಸೆಂಬರ್ 7ರಂದು ಸಭೆ ನಿರ್ಧಾರಗೊಂಡಿದೆ ಎಂದು ರೈತ ಸಂಘಟನೆ ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನ ಈಗಾಗಲೇ ಮೋದಿ ಸರ್ಕಾರ ಹಿಂಪಡೆದುಕೊಂಡಿದ್ದು, ಸಂಸತ್ ಅಧಿವೇಶನದಲ್ಲೂ ಈ ಮಸೂದೆ ಅಂಗೀಕಾರವಾಗಿದೆ. ಆದರೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇನ್ನಿತ್ತರ ಬೇಡಿಕೆಯೊಂದಿಗೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಇಂದು ಮಹತ್ವದ ಸಭೆ ನಡೆಯಿತು.
ನವೆಂಬರ್ 29ರಂದು ಟ್ರ್ಯಾಕ್ಟರ್ ಮಾರ್ಚ್ ನಡೆಸಲು ಮುಂದಾಗಿದ್ದ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 4ರವರೆಗೆ ಕಾಲಾವಕಾಶ ನೀಡಿ ಪತ್ರ ಬರೆದಿತ್ತು. ಇದೇ ಕಾರಣಕ್ಕಾಗಿ ಟ್ರ್ಯಾಕ್ಟರ್ ಮೆರವಣಿಗೆ ಮುಂದೂಡಿಕೆ ಮಾಡಿ, ಇಂದು ಮಹತ್ವದ ಸಭೆ ನಡೆಸಲು ನಿರ್ಧರಿಸಿತ್ತು. ಇಂದು ನಡೆದ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ರಾಕೇಶ್ ಟಿಕಾಯತ್ ಮಾತನಾಡಿದರು.