ಲಖನೌ :ಉತ್ತರಪ್ರದೇಶದಲ್ಲಿ ಈಗಿನಿಂದಲೇ ಚುನಾವಣೆ ಪ್ರಕ್ರಿಯೆಗಳು ಗರಿಗೆದರಿವೆ. ನಾಳೆಯಿಂದ ನಡೆಯಲಿರುವ ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆ (ಉತ್ತರಪ್ರದೇಶ ಬ್ಲಾಕ್ ಪ್ರಮುಖ್ ಚುನಾವಣೆ)ಗೆ ರೂಲಿಂಗ್ ಪಾರ್ಟಿ ಬಿಜೆಪಿ ಗೆಲ್ಲಬೇಕೆಂಬ ಗುರಿ ಹೊಂದಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳು ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ನಗರದ 13 ಕಿ.ಮೀ ದೂರದ ಲಖೀಂಪುರ್ ಕೇರಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ವಾರ್ಡ್/ಬ್ಲಾಕ್ ಪಂಚಾಯತ್ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಬಂದಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳಾ ಅಭ್ಯರ್ಥಿಯ ಸೀರೆಯನ್ನು ಕೆಲವರು ಎಳೆದಾಡಿದ್ದಾರೆ. ಅಷ್ಟೇ ಅಲ್ಲ, ಆಕೆಯ ನಾಮಪತ್ರವನ್ನು ಕಸಿದುಕೊಂಡಿದ್ದಾರೆ. ಈ ರೀತಿ ಮಾಡುವ ಮೂಲಕ ಆಕೆ ನಾಮಪತ್ರ ಸಲ್ಲಿಸದಂತೆ ತಡೆದು ವಿರೋಧಿ ಬಣದ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಲು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗ್ತಿದೆ.