ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆಗೆ ಮೊದಲನೇ ಹಂತದ ಚುನಾವಣೆ ಫೆ.10ರಂದು ನಡೆಯಲಿದ್ದು, ಇದಕ್ಕೆ ಕೆಲ ದಿನಗಳು ಬಾಕಿ ಇರುವಾಗ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 159 ಅಭ್ಯರ್ಥಿಗಳ ಪಟ್ಟಿಯಲ್ಲಿ ಅಖಿಲೇಶ್ ಯಾದವ್ ಹೆಸರು ಕೂಡ ಇದ್ದು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತಗೊಂಡಿದೆ.
ಪಟ್ಟಿಯ ಪ್ರಕಾರ ಸಮಾಜವಾದಿ ಪಕ್ಷದ ಪ್ರಮುಖ ಅಖಿಲೇಶ್ ಯಾದವ್ ಕರ್ಹಾಲ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇದೇ ಮೊದಲ ಸಲ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಉಳಿದಂತೆ ಕೈರಾನಾದಿಂದ ನಹಿದ್ ಹಸನ್, ಸುವಾರ್ನಿಂದ ಅಬ್ದುಲ್ಲಾ ಅಜಮ್ ಖಾನ್, ರಾಂಪುರದಿಂದ ಅಜಮ್ ಖಾನ್ ಹಾಗೂ ಜಸ್ವಂತ್ನಗರದಿಂದ ಶಿವಪಾಲ್ ಸಿಂಗ್ ಯಾದವ್ ಕಣಕ್ಕಿಳಿಯುತ್ತಿದ್ದಾರೆ.
ಪೂರ್ವ ಉತ್ತರ ಪ್ರದೇಶದ ಅಜಂಗಢದಿಂದ ಲೋಕಸಭೆ ಸಂಸದರಾಗಿರುವ ಅಖಿಲೇಶ್ ಯಾದವ್ ಇಲ್ಲಿಯವರೆಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆದರೆ, ಇದೇ ಮೊದಲ ಸಲ ಅವರು ಕಣಕ್ಕಿಳಿದಿದ್ದಾರೆ. 2012ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದ ವೇಳೆ ಅತಿ ಕಿರಿಯ ವಯಸ್ಸಿನ ಅಖಿಲೇಶ್ ಯಾದವ್(38 ವರ್ಷ) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.