ಚಂಡೀಗಢ (ಪಂಜಾಬ್): ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಚು ರೂಪಿಸಿದ್ದ ಹಾಗೂ ಈಗಾಗಲೇ ಜೈಲು ಪಾಲಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಟಾರ್ಗೆಟ್ ಲಿಸ್ಟ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿದ್ದರು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಬಹಿರಂಗ ಮಾಡಿದ್ದಾರೆ.
ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ ಕಪಿಲ್ ಪಂಡಿತ್‌ನ ಪ್ರಾಥಮಿಕ ವಿಚಾರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಹತ್ಯೆಯನ್ನು ನಡೆಸಲು ಸಂಪತ್ ನೆಹ್ರಾ ಮತ್ತು ಕೆನಡಾ ಮೂಲದ ಗೋಲ್ಡಿ ಬ್ರಾರ್ ಮೂಲಕ ನನ್ನನ್ನು ಸಂಪರ್ಕಿಸಲಾಗಿತ್ತು ಅಂತಾ ಕಪಿಲ್ ಪಂಡಿತ್ ಬಾಯ್ಬಿಟ್ಟಿದ್ದಾನೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರಾದ ಗೌರವ್ ಯಾದವ್ ಭಾನುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರ ಬರೆದಿದ್ದು ಗ್ಯಾಂಗ್‌ಸ್ಟರ್ ಬಿಷ್ಣೋಯಿ ಆಪ್ತ
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಬಂಧಿತರಾಗಿರುವ ಸಂತೋಷ್ ಜಾಧವ್ ಮತ್ತು ಅಜೆರ್ಬೈಜಾನ್ನಲ್ಲಿ ಬಂಧಿತರಾಗಿರುವ ಸಚಿನ್ ಥಾಪನ್ ಕೂಡ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೂಸೆವಾಲಾ ಕೊಲೆಯಾದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಬಂದಿತ್ತು.
ಡಿಜಿಪಿ ಗೌರವ್ ಯಾದವ್ ಹೇಳಿದ್ದೇನು?:ಬಾಲಿವುಡ್ ನಟ ಸಲ್ಮಾನ್ ಖಾನ್ ಟಾರ್ಗೆಟ್ ಮಾಡಿದ್ದ ಗ್ಯಾಂಗ್ನವರು ಮುಂಬೈನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಅಲ್ಲದೇ, ಸಾಕಷ್ಟು ಸಂಚಾರ ಕೂಡ ಮಾಡಿದ್ದಾರೆ ಎಂಬುದು ನಮ್ಮ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಡಿಜಿಪಿ ಗೌರವ್ ಯಾದವ್ ಮಾಹಿತಿ ನೀಡಿದರು. ಅಲ್ಲದೇ, ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿರುವ ಕಾರಣವಿನ್ನೂ ಪ್ರಾಥಮಿಕವಾಗಿ ದೃಢೀಕರಿಸಲ್ಪಟ್ಟಿಲ್ಲ. ಮುಂಬೈಗೆ ತಂಡವನ್ನು ನಾವು ಕಳುಹಿಸಲು ತೀರ್ಮಾನಿಸಿದ್ದೇವೆ ಎಂದರು.