ನವದೆಹಲಿ:ಸ್ವದೇಶಿ ನಿರ್ಮಿತ ವಿದೇಶಿ ಮದ್ಯ (Indian-made foreign liquor - IMFL) ಮಾರಾಟವು 2022-23ರ ಆರ್ಥಿಕ ವರ್ಷದಲ್ಲಿ 385 ಮಿಲಿಯನ್ ಕೇಸ್‌ಗಳಿಗೆ ತಲುಪಿದ್ದು, ಮಾರಾಟದಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 750 ಎಂಎಲ್ ಬಾಟಲಿಯ ಪ್ರತಿ 1,000 ರೂ.ಗಿಂತ ಹೆಚ್ಚಿನ ಪ್ರೀಮಿಯಂ ಉತ್ಪನ್ನಗಳ ಬೆಲೆಯ ಮದ್ಯ ಮಾರಾಟದಲ್ಲಿ ಶೇ.48ರಷ್ಟು ಏರಿಕೆಯಾಗಿದೆ.
ಕೋವಿಡ್-19 ಸಾಂಕ್ರಾಮಿಕಕ್ಕಿಂತ ಮೊದಲು ಎಂದರೆ 2019-20ರ ವಿತ್ತೀಯ ವರ್ಷಕ್ಕೆ ಹೋಲಿಸಿದರೆ, ಸ್ವದೇಶಿ ನಿರ್ಮಿತ ವಿದೇಶಿ ಮದ್ಯ ಮಾರಾಟ ಸುಮಾರು ಶೇ.12ರಷ್ಟು ಹೆಚ್ಚಾಗಿದ್ದು, ಮದ್ಯ ಮಾರಾಟದ ಮೇಲೆ ಕೋವಿಡ್ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಉದ್ಯಮವು ಶೇ.8ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಇದು ಸುಮಾರು 412ರಿಂದ 415 ಮಿಲಿಯನ್ ಕೇಸ್‌ಗಳಿಗೆ (ಒಂದು ಕೇಸ್ ಅಂದರೆ ತಲಾ 9 ಲೀಟರ್ ಮದ್ಯ) ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (Confederation of Indian Alcoholic Beverage Companies - CIABC)ದ ವರದಿ ಹೇಳಿದೆ.
ವಿಸ್ಕಿಗೆ ಡಿಮ್ಯಾಂಡ್: ಸಿಐಎಬಿಸಿ ಅಂಕಿ-ಅಂಶದ ಪ್ರಕಾರ, ವಿಸ್ಕಿಗೆ ಡಿಮ್ಯಾಂಡ್ ಹೆಚ್ಚಾಗಿರುವುದು ಕಂಡು ಬರುತ್ತದೆ. 2022-23ನೇ ಸಾಲಿನಲ್ಲಿ ವಿಸ್ಕಿಯು 243 ಮಿಲಿಯನ್ ಕೇಸ್ಗಳ ನಿರೀಕ್ಷಿತ ಮಾರಾಟ ಕಂಡಿದೆ. ಇದರೊಂದಿಗೆ ಅತಿಹೆಚ್ಚು ಮಾರಾಟದ ಸರಕು ಕೂಡಾ ವಿಸ್ಕಿಯಾಗಿದ್ದು, ಒಟ್ಟು ಉದ್ಯಮದಲ್ಲಿ ಶೇ.63ರಷ್ಟು ಪಾಲು ಹೊಂದಿದೆ. ಹಲವು ವರ್ಷಗಳ ನಂತರ ವಿಸ್ಕಿ ಮತ್ತೆ ತನ್ನ ಡಿಮ್ಯಾಂಡ್ ವೃದ್ಧಿಸಿಕೊಂಡಿದೆ.
ಅಲ್ಲದೇ, ಗ್ರಾಹಕರು ಹೆಚ್ಚಿನ ಬೆಲೆಯ ಬಾಟಲಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮ, ಕಡಿಮೆ ವಿಭಾಗ ಬೆಲೆಗಳಿಗಿಂತ ಹೆಚ್ಚಿನ ಬೆಲೆಯ ಬಾಟಲಿಗಳ ಮಾರಾಟ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಪ್ರತಿ 750 ಎಂಎಲ್ ಬಾಟಲಿನ 500 ರೂ.ಗಿಂತ ಹೆಚ್ಚಿನ ಬ್ರಾಂಡ್‌ಗಳ ಪಾಲು ಶೇ.20ರಷ್ಟಿದ್ದರೆ, 1,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಮದ್ಯದಲ್ಲಿ ಶೇ.48ರಷ್ಟು ಏರಿಕೆ ಕಂಡು ಬಂದಿದೆ. ಆದಾಗ್ಯೂ ಇನ್ನೂ ಕಡಿಮೆ ಬೆಲೆಯ ಉತ್ಪನ್ನಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. 750ಎಂಲ್ನ ಬಾಟಲಿನ 500 ರೂ.ಗಿಂತ ಕಡಿಮೆ ಬೆಲೆಯ ಬ್ರಾಂಡ್‌ಗಳು ಒಟ್ಟು ಮಾರಾಟದ ಶೇ.79ರಷ್ಟು ಪಾಲು ಹೊಂದಿವೆ.