ಕಲ್ಲೂರು (ಆಂಧ್ರಪ್ರದೇಶ): ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. ಒಂದೆಡೆ ಟೊಮೆಟೊ ಬೆಲೆ ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದ್ದು, ತರಕಾರಿ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆಯೇ ಟೊಮೆಟೊ ಬೆಲೆ ಏರಿಕೆಯಿಂದ ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆಂಧ್ರ ಪ್ರದೇಶದ ರೈತ ಕುಟುಂಬವೊಂದು ಕಳೆದ ಒಂದು ತಿಂಗಳಲ್ಲಿ ಟೊಮೆಟೊ ಬೆಳೆದು ಸುಮಾರು 3 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಹೌದು, ಇಲ್ಲಿನ ಚಿತ್ತೂರು ಜಿಲ್ಲೆಯ ರೈತ ಕುಟುಂಬವು ತಮ್ಮ 22 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದು ಕೈತುಂಬಾ ಆದಾಯ ಗಳಿಸಿದೆ. ಈ ರೈತ ಕುಟುಂಬದವರು ಬೇಸಿಗೆ ನಂತರ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಅಂದಾಜಿಸಿ ಕಳೆದ ಎರಡು ವರ್ಷಗಳ ಹಿಂದೆಯೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮೆಟೊ ಬೆಳೆದಿದ್ದರು. ಇದೀಗ ಟೊಮೆಟೊ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ತಿಂಗಳೊಂದರಲ್ಲೇ ಮೂರು ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
22 ಎಕರೆಯಲ್ಲಿ ಟೊಮೆಟೊ ಬೆಳೆ.. 3 ಕೋಟಿ ಆದಾಯ: ರೈತರಾದ ಪಿ ಚಂದ್ರಮೌಳಿ, ಇವರ ಸಹೋದರ ಮುರಳಿ, ತಾಯಿ ರಾಜಮ್ಮ ಅವರು ಜಿಲ್ಲೆಯ ಸೊಮಲ ತಾಲೂಕಿನ ಕರಕಮಂಡ ಗ್ರಾಮದ ಜಮೀನಿನಲ್ಲಿ ಒಟ್ಟಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಸ್ವಗ್ರಾಮ ಕರಕಮಂಡದಲ್ಲಿ 12 ಎಕರೆ ಮತ್ತು ಪುಲಿಚೆರ್ಲಾದ ಸುವ್ವಾರಪುವರಿಪಲ್ಲಿ ಗ್ರಾಮದಲ್ಲಿ 20 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ ಕಳೆದ ಹಲವು ವರ್ಷಗಳಿಂದ ಟೊಮೆಟೊ ಕೃಷಿ ಮಾಡಿಕೊಂಡು ಬಂದಿದ್ದಾರೆ.
ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಇವರು, ಆಧುನಿಕ ಕೃಷಿ ಪದ್ಧತಿಗಳು, ಹೊಸ ಹೊಸ ವಿಧಾನಗಳು, ಮಾರುಕಟ್ಟೆ ತಂತ್ರಗಳಿಗೆ ಅನುಗುಣವಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ವರ್ಷಗಳ ಅನುಭವದ ನಂತರ ಬೇಸಿಗೆಯ ನಂತರ ಟೊಮೆಟೊ ಉತ್ತಮ ಇಳುವರಿ ಮತ್ತು ಬೆಲೆ ಪಡೆಯುವುದನ್ನು ಇವರು ಕಂಡುಕೊಂಡಿದ್ದಾರೆ. ಅಂತೆಯೇ ಎಪ್ರಿಲ್ ತಿಂಗಳಲ್ಲಿ ಟೊಮೆಟೊ ನೆಟ್ಟು ಜೂನ್ ತಿಂಗಳಲ್ಲಿ ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ.
ಸಾಹೂ ತಳಿಯ ಟೊಮೆಟೊ :ಇವರು ಸಾಹೂ ತಳಿಯ ಟೊಮೆಟೊವನ್ನು ಒಟ್ಟು 22 ಎಕರೆಯಲ್ಲಿ ಬೆಳೆದಿದ್ದಾರೆ. ಇದಕ್ಕೆ ಅರಣ್ಯ ಸೂಕ್ಷ್ಮ ನೀರಾವರಿ ವಿಧಾನದ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಜೂನ್ ಅಂತ್ಯದಲ್ಲಿ ಟೊಮೆಟೊ ಬೆಳೆ ಇಳುವರಿ ಬಂದಿದ್ದು, ಇದನ್ನು ಕರ್ನಾಟಕದ ಕೋಲಾರ ಜಿಲ್ಲೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕೋಲಾರ ಮಾರುಕಟ್ಟೆಯಲ್ಲಿ ಸುಮಾರು 15 ಕೆಜಿ ಟೊಮೆಟೊ ಬಾಕ್ಸ್ಗಳು 1000 ದಿಂದ 1500 ರೂಪಾಯಿಗೆ ಮಾರಾಟವಾಗುತ್ತಿವೆ. ಇದುವರೆಗೆ 40 ಸಾವಿರ ಟೊಮೆಟೊ ಬಾಕ್ಸ್ಗಳನ್ನು ಮಾರಾಟ ಮಾಡಿದ್ದು, 4 ಕೋಟಿ ರೂಪಾಯಿ ಗಳಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರೈತ ಕುಟುಂಬ, ಎಕರೆಗೆ 3 ಲಕ್ಷದಂತೆ 22 ಎಕರೆಗೆ 70 ಲಕ್ಷ ರೂ. ಖರ್ಚು ಮಾಡಿದ್ದೇವೆ. ಇದರಲ್ಲಿ ಮಾರುಕಟ್ಟೆ ಕಮಿಷನ್ 20 ಲಕ್ಷ, ಸಾಗಣೆ ವೆಚ್ಚ 10 ಲಕ್ಷ ರೂಪಾಯಿ ಆಗಿದೆ. ಎಲ್ಲವನ್ನು ಕಳೆದು 3 ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ಈ ರೈತ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ :ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್ ಕ್ವೀನ್!