ನವದೆಹಲಿ:ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ವರ್ಷದ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡದ ಪ್ರಸಿದ್ಧ ಲೇಖಕಿ ಸುಧಾ ಮೂರ್ತಿ, ವಿಜಯಶ್ರೀ ಹಾಲಾಡಿ ಸೇರಿ 22 ಜನರು ಹಾಗೂ ಯುವ ಪುರಸ್ಕಾರಕ್ಕೆ ಮಂಜುನಾಯಕ್ ಚಳ್ಳೂರು ಸೇರಿ 20 ಲೇಖಕರು ಭಾಜನರಾಗಿದ್ದಾರೆ.
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಾಧವ್ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಣಿಪುರಿ, ಮೈಥಿಲಿ ಮತ್ತು ಸಂಸ್ಕೃತಕ್ಕೆ ಯುವ ಪುರಸ್ಕಾರ ಪುರಸ್ಕೃತರನ್ನು ಮತ್ತು ಮಣಿಪುರಿಗೆ ಬಾಲ ಸಾಹಿತ್ಯ ಪುರಸ್ಕಾರವನ್ನು ನಂತರ ಪ್ರಕಟಿಸುವುದಾಗಿ ಅಕಾಡೆಮಿ ತಿಳಿಸಿದೆ. ಒಡಿಯಾಗೆ ಯಾವುದೇ ಯುವ ಪುರಸ್ಕಾರ ಮತ್ತು ಕಾಶ್ಮೀರಿಗೆ ಯಾವುದೇ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿಲ್ಲ.
ಕರ್ನಾಟಕದ ಪ್ರಶಸ್ತಿ ಪುರಸ್ಕೃತರು: ಬಾಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾದ ಪ್ರಶಸ್ತಿ ಪುರಸ್ಕೃತರಲ್ಲಿ ಹೆಸರಾಂತ ಮಕ್ಕಳ ಲೇಖಕಿ ಸುಧಾ ಮೂರ್ತಿ ಅವರ 'ಗ್ರ್ಯಾಂಡ್ಪೆರೆಂಟ್ಸ್ ಬ್ಯಾಗ್ ಆಫ್ ಸ್ಟೋರಿಸ್'ಎಂಬ ಕಥಾ ಸಂಕಲನಕ್ಕೆ ಪ್ರಶಸ್ತಿ ನೀಡಲಾಗಿದೆ. ಮತ್ತೊಬ್ಬ ಕನ್ನಡತಿ ವಿಜಯಶ್ರೀ ಹಾಲಾಡಿ ಅವರ 'ಸೂರಕ್ಕಿ ಗೇಟ್' ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ. ಕನ್ನಡದ ಯುವ ಕತೆಗಾರ ಮಂಜುನಾಯಕ್ ಚಳ್ಳೂರು ಅವರ 'ಫೂ ಮತ್ತು ಇತರ ಕತೆಗಳು' ಕಥಾ ಸಂಕಲನಕ್ಕೆ ಯುವ ಪುರಸ್ಕಾರ ದೊರೆತಿದೆ. ಎರಡೂ ಪ್ರಶಸ್ತಿಗಳ ವಿಜೇತರಿಗೆ ತಾಮ್ರದ ಫಲಕ ಮತ್ತು ತಲಾ 50,000 ರೂ.ಗಳ ಬಹುಮಾನ ನೀಡಲಾಗುತ್ತದೆ.
ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯ ಹಿಂದಿ ಭಾಷಾ ವಿಭಾಗದಲ್ಲಿ ಸೂರ್ಯನಾಥ್ ಸಿಂಗ್ ಅವರ ‘ಕೋಟುಕ್ ಆಪ್’ ಎಂಬ ಸಣ್ಣ ಕಥೆಗಳ ಸಂಕಲನ ಆಯ್ಕೆಯಾಗಿದೆ. ಹಿಂದಿ ಭಾಷೆಯ ವಿಭಾಗದಲ್ಲಿ ಅನಿರುದ್ಧ್ ಕಣಿಸೆಟ್ಟಿ ಅವರು 'ಲಾರ್ಡ್ಸ್ ಆಫ್ ದಿ ಡೆಕ್ಕನ್: ಸದರ್ನ್ ಇಂಡಿಯಾ ಫ್ರಮ್ ಚಾಲುಕ್ಯಸ್ ಟು ಚೋಳರು' ಕೃತಿ ಹಾಗೂ ಅತುಲ್ ಕುಮಾರ್ ರೈ ಅವರ 'ಚಂದಪುರ್ ಕಿ ಚಂದಾ' ಕಾದಂಬರಿಗೆ ಯುವ ಪುರಸ್ಕಾರ ಲಭಿಸಿದೆ.
ಬಾಲ ಸಾಹಿತ್ಯ ಪುರಸ್ಕಾರ ವಿಜೇತರು: ರೋತೀಂದ್ರನಾಥ ಗೋಸ್ವಾಮಿ (ಅಸ್ಸಾಮಿ), ಶ್ಯಾಮಲಕಾಂತಿ ದಾಸ್ (ಬಂಗಾಳಿ), ಪ್ರತಿಮಾ ನಂದಿ ನರ್ಜಾರಿ (ಬೋಡೋ), ಬಲ್ವಾನ್ ಸಿಂಗ್ ಜಮೋರಿಯಾ (ಡೋಗ್ರಿ), ರಕ್ಷಾಬಹೆನ್ ಪ್ರಹ್ಲಾದರಾವ್ ದವೆ (ಗುಜರಾತಿ), ತುಕಾರಾಂ ರಾಮ ಶೇಟ್ (ಕೊಂಕಣಿ), ಅಕ್ಷಯ್ ಆನಂದ್ 'ಸನ್ನಿ' (ಮೈಥಿಲಿ), ಪ್ರಿಯಾ ಎಎಸ್ (ಮಲಯಾಳಂ), ಏಕನಾಥ್ ಅವಹದ್ (ಮರಾಠಿ), ಮಧುಸೂದನ್ ಬಿಷ್ತ್ (ನೇಪಾಳಿ), ಜುಗಲ್ ಕಿಶೋರ್ ಸಾರಂಗಿ (ಒಡಿಯಾ), ಗುರ್ಮೀತ್ ಕಾರ್ಯಲ್ವಿ (ಪಂಜಾಬಿ), ಕಿರಣ್ ಬಾದಲ್ (ರಾಜಸ್ಥಾನಿ), ರಾಧಾವಲ್ಲಭ ತ್ರಿಪಾಠಿ (ಸಂಸ್ಕೃತ), ಮಾನ್ಸಿಂಗ್ ಮಝಿ (ಸಂತಾಲಿ), ಧೋಲನ್ ರಾಹಿ (ಸಿಂಧಿ), ಉದಯಶಂಕರ್ (ತಮಿಳು), ಡಿಕೆ ಚದುವುಲಾ ಬಾಬು (ತೆಲುಗು) ಮತ್ತು ಮತೀನ್ ಅಚಲಪುರಿ ಅವರು ಬಾಲ ಸಾಹಿತ್ಯ ಪುರಸ್ಕಾರ ಪಡೆದಿದ್ದಾರೆ.
ಯುವ ಪುರಸ್ಕಾರ ಪುರಸ್ಕೃತರು: ಜಿಂಟು ಗೀತಾರ್ಥ (ಅಸ್ಸಾಮಿ), ಹಮೀರುದ್ದೀನ್ ಮಿಡ್ದ್ಯ (ಬಂಗಾಳಿ), ಮೈನೋಸ್ರಿ ಡೈಮರಿ (ಬೋಡೋ), ಸಾಗರ್ ಶಾ (ಗುಜರಾತಿ), ನಿಘತ್ ನಸ್ರೀನ್ (ಕಾಶ್ಮೀರಿ), ತನ್ವಿ ಕಾಮತ್ ಬಾಂಬೋಲ್ಕರ್ (ಕೊಂಕಣಿ), ಗಣೇಶ್ ಪುತ್ತು (ಮಲಯಾಳಂ), ವಿಶಾಖ ವಿಶ್ವನಾಥ್ (ಮರಾಠಿ), ನೈನಾ ಅಧಿಕಾರಿ (ನೇಪಾಳಿ), ಸಂದೀಪ್ (ಪಂಜಾಬಿ), ದೇವಿಲಾಲ್ ಮಹಿಯಾ (ರಾಜಸ್ಥಾನಿ), ಬಾಪಿ ತುಡು (ಸಂತಲಿ), ಮೋನಿಕಾ ಜೆ ಪಂಜ್ವಾನಿ (ಸಿಂಧಿ), ರಾಮ್ ತಂಗಮ್ (ತಮಿಳು), ಜಾನಿ ತಕ್ಕೆಡಸಿಲಾ (ತೆಲುಗು), ಧೀರಜ್ ಬಿಸ್ಮಿಲ್ (ಡೋಗ್ರಿ) ಮತ್ತು ತೌಸೀಫ್ ಬರೇಲ್ವಿ (ಉರ್ದು) ಅವರು ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇದನ್ನೂ ಓದಿ:ಇಂಗ್ಲೀಷ್ ಕೇವಲ ಸಾಮ್ರಾಜ್ಯದ ಭಾಷೆಯಾಗದೇ ಜಗದ್ವಲಯ ಭಾಷೆಯಾಗಿದೆ: ಯುನೆಸ್ಕೋದ ವಿಶ್ರಾಂತ ರಾಯಭಾರಿ ಚಿರಂಜೀವಿ ಸಿಂಗ್