ಸಹರ್ಸಾ (ಬಿಹಾರ್): ಬಿಹಾರದ ಸಹರ್ಸಾದ ದಿಲ್ಖುಷ್ ಹೆಸರಿನ ವ್ಯಕ್ತಿ ಒಂದು ಕಾಲದಲ್ಲಿ ದೆಹಲಿಯ ಬೀದಿಗಳಲ್ಲಿ ಪೆಡಲ್ ರಿಕ್ಷಾ ಎಳೆಯುತ್ತಿದ್ದರು. ಇಂದು ಅವರು ತಮ್ಮದೇ ಆದ ಸ್ಟಾರ್ಟ್ಅಪ್ ಕಂಪನಿಯನ್ನು ಹೊಂದಿದ್ದಾರೆ. ಅವರು ಪಾಟ್ನಾದಲ್ಲಿ ಸ್ಟಾರ್ಟಪ್ ಕ್ಯಾಬ್ ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ದಿಲ್ಖುಷ್ ಯಶಸ್ಸಿನ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ರಿಕ್ಷಾ ಚಾಲಕನಿಂದ ಹಿಡಿದು ಕ್ಯಾಬ್ ಕಂಪನಿಯ ಮಾಲೀಕರಾಗುವವರೆಗೆ ಅವರು ಹೇಗೆ ವ್ಯಾಪಾರ ಬೆಳೆಸಿದರು ಎಂಬುದು ಕುತೂಹಲಕರವಾಗಿದೆ. ದಿಲ್ಖುಷ್ ಬಿಹಾರದ ಸಹರ್ಸಾ ಜಿಲ್ಲೆಯ ಬಂಗಾವ್ ನಿವಾಸಿ. ಪ್ರಸ್ತುತ 3200 ಕ್ಕೂ ಹೆಚ್ಚು ವಾಹನಗಳು ಅವರ ಆ್ಯಪ್ ಆಧಾರಿತ ಕ್ಯಾಬ್ ಕಂಪನಿಯೊಂದಿಗೆ ಅಟ್ಯಾಚ್ ಆಗಿವೆ.
ದಿಲ್ಖುಷ್ ಅವರ ಕ್ಯಾಬ್ ಕಂಪನಿಯಲ್ಲಿ 3200 ವಾಹನಗಳಲ್ಲದೆ, ಅಷ್ಟೇ ಸಂಖ್ಯೆಯ ಚಾಲಕರು ಸಹ ಅವರೊಂದಿಗೆ ಸೇರಿಕೊಂಡು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ 25,000 ವಾಹನಗಳನ್ನು ತನ್ನ ನೆಟ್ವರ್ಕ್ಗೆ ಸೇರಿಸುವ ಗುರಿಯನ್ನು ಅವರು ಹೊಂದಿದ್ದಾರೆ. ದಿಲ್ಖುಷ್ ಓದಿದ್ದು ಇಂಟರ್ ಮೀಡಿಯೇಟ್ ವರೆಗೆ ಮಾತ್ರ. ತಂದೆ ಪವನ್ ಬಸ್ ಚಾಲಕರಾಗಿದ್ದರು. ಬಸ್ ಚಾಲಕನ ಮಗ ಬಸ್ ಚಾಲಕನೇ ಆಗುತ್ತಾನೆ ಎಂದು ಹಳ್ಳಿಯ ಜನ ಮಾತನಾಡುತ್ತಿದ್ದರು. ಆದರೆ ದಿಲ್ಖುಷ್ ಗೆ ಬಸ್ ಡ್ರೈವರ್ ಆಗುವುದು ಕೂಡ ಸುಲಭವಾಗಿರಲಿಲ್ಲ. ಗ್ರಾಮದಲ್ಲಿ ಉದ್ಯೋಗ ಶಿಬಿರ ಆಯೋಜಿಸಿದ್ದಾಗ ಖಾಸಗಿ ಶಾಲೆಯಲ್ಲಿ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ನೌಕರಿ ಸಿಗಲಿಲ್ಲ.
ಕೊನೆಗೆ ದಿಲ್ಖುಷ್ ಉದ್ಯೋಗದ ಹುಡುಕಾಟದಲ್ಲಿ ದೆಹಲಿಗೆ ತೆರಳಿದರು. ಆದರೆ ಬಸ್ ಡ್ರೈವರ್ ಕೆಲಸ ಮಾತ್ರ ಸಿಗಲಿಲ್ಲ. ಯಾವುದೇ ದಾರಿ ಕಾಣದೆ ಪೆಡಲ್ ರಿಕ್ಷಾ ಓಡಿಸಲು ಪ್ರಾರಂಭಿಸಿದರು. ಈ ಮಧ್ಯೆ ಕಾಯಿಲೆ ಪೀಡಿತರಾಗಿ ಮನೆಗೆ ಮರಳಿದಾಗ ತಾವು ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ನಿರ್ಧರಿಸಿದರು. ನಂತರ ಸ್ಟಾರ್ಟಪ್ ಯೋಜನೆಯಡಿ ಬಿಹಾರ ಸರ್ಕಾರದ ಸೀಡ್ ಫಂಡ್ ನಿಂದ ಐದೂವರೆ ಲಕ್ಷ ರೂಪಾಯಿ ಸಾಲ ಪಡೆದು 2016ರ ಅಕ್ಟೋಬರ್ ನಲ್ಲಿ ಆರ್ಯಾಗೋ ಹೆಸರಿನಲ್ಲಿ ಕ್ಯಾಬ್ ಸೇವೆ ಆರಂಭಿಸಿದ್ದರು. ಇದರಲ್ಲಿ ಸುಮಾರು 350 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಸಹರ್ಸಾದ ಹೊರತಾಗಿ, ಇದು ನೆರೆಯ ಜಿಲ್ಲೆಗಳಾದ ಸುಪೌಲ್ ಮತ್ತು ದರ್ಭಾಂಗದವರೆಗೆ ನೆಟ್‌ವರ್ಕ್ ಹೊಂದಿದೆ.