ಮುಂಬೈ: ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕ 'ಸಹರಾಶ್ರೀ' ಸುಬ್ರತಾ ರಾಯ್ ಅವರು ಮಂಗಳವಾರ ರಾತ್ರಿ ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ರಾಯ್ ನಿಧನಕ್ಕೆ ಸಂತಾಪ ಸೂಚಿಸಿರುವ ಸಹಾರಾ ಇಂಡಿಯಾ ಗ್ರೂಪ್, "ಸಹಾರಾ ಇಂಡಿಯಾ ಪರಿವಾರದ ಮ್ಯಾನೇಜಿಂಗ್ ವರ್ಕರ್ ಮತ್ತು ಚೇರ್ಮನ್ ಆಗಿರುವ ‘ಸಹರಾಶ್ರೀ’ ಸುಬ್ರತಾ ರಾಯ್ ಅವರ ನಿಧನವನ್ನು ಕಂಪನಿಯು ತೀವ್ರ ದುಃಖದಿಂದ ತಿಳಿಸುತ್ತಿದೆ. ಅಂತಿಮ ವಿಧಿ ವಿಧಾನಗಳ ಬಗ್ಗೆ ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು. ಅವರು ನಮಗೆ ಮಾರ್ಗದರ್ಶಕರಾಗಿದ್ದರು. ಜೊತೆಗೆ ಕೆಲಸ ಮಾಡುವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದರು" ಎಂದು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಸಹಾರಾ ಇಂಡಿಯಾ ಪರಿವಾರವು ರಾಯ್ ಅವರ ಪರಂಪರೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ ಮತ್ತು ಸಂಸ್ಥೆಯು ಅವರ ದೃಷ್ಟಿಕೋನವನ್ನು ಗೌರವಿಸಿ, ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಮೃತರು ಪತ್ನಿ ಸ್ವಪ್ನಾ ರಾಯ್, ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಎಂಬ ಇಬ್ಬರು ಪುತ್ರರನ್ನು ಅಗಲಿದ್ದಾರೆ.
"ಸಹರಾಶ್ರೀ ಅವರು ಸ್ಪೂರ್ತಿದಾಯಕ ನಾಯಕ ಮತ್ತು ದಾರ್ಶನಿಕರಾಗಿದ್ದರು. ನವೆಂಬರ್ 14ರ ರಾತ್ರಿ 10.30ಕ್ಕೆ ಮೆಟಾಸ್ಟಾಟಿಕ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗುವ ಅನಾರೋಗ್ಯದ ಸಮಸ್ಯೆಗಳ ಜೊತೆಗೆ ಹೃದಯ ಸ್ತಂಭನದಿಂದಾಗಿ ನಿಧನರಾದರು. ಆರೋಗ್ಯ ಕ್ಷೀಣಿಸಿದ ಬಳಿಕ ಅವರನ್ನು ನವೆಂಬರ್ 12ರಂದು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು" ಎಂದು ಮುಂಬೈ ವೈದ್ಯಕೀಯ ಸಂಶೋಧನಾ ಸಂಸ್ಥೆ (ಕೆಡಿಎಹೆಚ್) ಮಾಹಿತಿ ನೀಡಿದೆ.
ಜೂನ್ 10, 1948ರಂದು ಬಿಹಾರದ ಅರಾರಿಯಾದಲ್ಲಿ ಸುಬ್ರತಾ ರಾಯ್ ಜನಿಸಿದರು. ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಾರಾ ಗ್ರೂಪ್ ವಿಶಾಲ ಸಾಮ್ರಾಜ್ಯ ಹೊಂದಿದೆ. ಇನ್ನೊಂದೆಡೆ, ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಸೃಷ್ಟಿಸಿದ ರಾಯ್ ಭಾರಿ ವಿವಾದದ ಕೇಂದ್ರಬಿಂದುವೂ ಆಗಿದ್ದರು. ಬಹುಹಂತದ ವ್ಯಾಪಾರೋದ್ಯಮವನ್ನು ರಚಿಸಲು ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಗಳನ್ನು ಎದುರಿಸಿದ್ದರು.