ಉಜ್ಜೈನಿ(ಮಧ್ಯಪ್ರದೇಶ):ರಾಮಾಯಣ ಎಕ್ಸ್‌ಪ್ರೆಸ್ ರೈಲು ಸಿಬ್ಬಂದಿಗೆ ನೀಡಿದ್ದ ವಿವಾದಾತ್ಮಕ ಸಮವಸ್ತ್ರವನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ವಾಪಸ್ ಪಡೆದಿದೆ. ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ವೇಟರ್‌ಗಳು ಕೇಸರಿ ಸಮವಸ್ತ್ರ ಧರಿಸುವುದಕ್ಕೆ ಸ್ಥಳೀಯ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ರೈಲಿನಲ್ಲಿ ಉಪಹಾರ ನೀಡುವ ವೇಟರ್ ಸಾಧುಗಳಂತೆ ಕೇಸರಿ ಉಡುಪು ಧರಿಸಿ ಕತ್ತಲ್ಲಿ ರುದ್ರಾಕ್ಷಿ ಮಾಲೆಯನ್ನು ಹಾಕಿಕೊಂಡಿದ್ದರು. ಇದು ಹಿಂದೂ ಧರ್ಮ ಹಾಗೂ ಸಾಧುಗಳಿಗೆ ಅಪಮಾನಕಾರಿಯಾಗಿದೆ ಎಂದು ಉಜ್ಜೈನಿ ಅಖಾಡ ಪರಿಷತ್ ಮಾಜಿ ಪ್ರಧಾನ ಕಾರ್ಯದರ್ಶಿ ಆವದೇಶಪುರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿಬ್ಬಂದಿ ಸಮವಸ್ತ್ರವನ್ನು ಬದಲಿಸಿರುವುದಾಗಿ ಐಆರ್‌ಟಿಸಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
ಸೇವಾ ಸಿಬ್ಬಂದಿಯ ವೃತ್ತಿಪರ ಉಡುಪನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಭಾರತೀಯ ಸಾರ್ವಜನಿಕ ವಲಯದ ಸಂಸ್ಥೆಯು ತನ್ನ ಸಿಬ್ಬಂದಿಗೆ ಫಾರ್ಮಲ್ ಶರ್ಟ್‌ಗಳು, ಪ್ಯಾಂಟ್‌ಗಳು, ಪೇಟ ಹಾಗೂ ಕೇಸರಿ ಮಾಸ್ಕ್‌ಗಳನ್ನು ನೀಡಿರುವ ಚಿತ್ರಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದೆ.
ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ವೇಟರ್‌ಗಳು ಕೇಸರಿ ಸಮವಸ್ತ್ರ ಧರಿಸಿ ಸೇವೆ ನೀಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಇದಕ್ಕೆ ಉಜ್ಜಯಿನಿಯಲ್ಲಿರುವ ಸಾಧುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಡಿಸೆಂಬರ್ 12 ರಂದು ಪ್ರತಿಭಟನೆ ನಡೆಸುವುದಾಗಿ ರೈಲ್ವೆ ಸಚಿವರಿಗೂ ಪತ್ರ ಬರೆದಿದ್ದರು.
ಉಜ್ಜಯಿನಿ, ಅಯೋಧ್ಯೆ ಹಾಗೂ ಚಿತ್ರಕೂಟ ಸೇರಿದಂತೆ ಶ್ರೀರಾಮನಿಗೆ ಸಂಬಂಧಿಸಿದ ಧಾರ್ಮಿಕ ಸ್ಥಳಗಳಿಗೆ ಭಕ್ತ ಪ್ರವಾಸಿಗರನ್ನು ಕರೆದೊಯ್ಯುವ ರಾಮಾಯಣ ಸರ್ಕ್ಯೂಟ್ ರೈಲನ್ನು ಭಾರತೀಯ ರೈಲ್ವೇ ಪ್ರಾರಂಭಿಸಿದೆ.