ಜೈಪುರ (ರಾಜಸ್ಥಾನ):ರಾಜಸ್ಥಾನದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಟೀಕೆ ಮಾಡಿದ ಕಾರಣಕ್ಕೆ ಸಚಿವ ಸಂಪುಟದಿಂದ ವಜಾಗೊಂಡಿರುವ ಆಡಳಿತಾರೂಢ ಕಾಂಗ್ರೆಸ್ ಶಾಸಕ ರಾಜೇಂದ್ರ ಗುಧಾ ಇದೀಗ 'ಕೆಂಪು ಡೈರಿ'ಯ ಮೂರು ಪುಟಗಳನ್ನು ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಸರ್ಕಾರದ ಹಣಕಾಸಿನ ಅವ್ಯವಹಾರಗಳು ಮತ್ತು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಭ್ರಷ್ಟಾಚಾರದ ಕುರಿತು ರಾಜೇಂದ್ರ ಗುಧಾ ಆರೋಪ ಮಾಡಿದ್ದಾರೆ.
2020ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿಯ ಸಮಯದಲ್ಲಿ ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಆರ್‌ಟಿಡಿಸಿ) ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರ ನಿವಾಸದಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿರ್ದೇಶನದ ಮೇರೆಗೆ 'ಕೆಂಪು ಡೈರಿ'ಯನ್ನು ಪಡೆದುಕೊಂಡಿದ್ದೇನೆ ಎಂದು ರಾಜೇಂದ್ರ ಗುಧಾ ತಿಳಿಸಿದ್ದರು. ಆದರೆ, ನಂತರ ಸಿಎಂ ಅಶೋಕ್ ಗೆಹ್ಲೋಟ್ ಈ ಆರೋಪಗಳನ್ನು ತಳ್ಳಿಹಾಕಿದ್ದರು. ಅಂತಹ ಯಾವುದೇ ಕೆಂಪು ಡೈರಿ ಅಸ್ತಿತ್ವದಲ್ಲಿಲ್ಲ ಎಂದು ಗೆಹ್ಲೋಟ್ ಹೇಳಿದ್ದರು.
ಇದನ್ನೂ ಓದಿ:ತಮ್ಮದೇ ರಾಜ್ಯದ ಕಾನೂನು, ಸುವ್ಯವಸ್ಥೆ ಬಗ್ಗೆ ಟೀಕೆ: ಸಚಿವ ರಾಜೇಂದ್ರ ಗುಧಾ ವಜಾಗೊಳಿಸಿದ ರಾಜಸ್ಥಾನ ಸಿಎಂ ಗೆಹ್ಲೋಟ್
ಬುಧವಾರ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ರಾಜೇಂದ್ರ ಗುಧಾ, 'ಕೆಂಪು ಡೈರಿ'ಯ ಮೂರು ಪುಟಗಳನ್ನು ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಮತ್ತು ರಾಜಸ್ಥಾನ ಕ್ರಿಕೆಟ್ ಸಂಸ್ಥೆ (ಆರ್‌ಸಿಎ) ಕಾರ್ಯದರ್ಶಿ ಭವಾನಿ ಸಮೋಟಾ ಮತ್ತು ಇತರರ ನಡುವಿನ ಹಣಕಾಸು ವಹಿವಾಟಿನ ವಿವರಗಳಿವೆ ಎಂದು ಆರೋಪಿಸಿದ್ದಾರೆ. ವೈಭವ್ ಗೆಹ್ಲೋಟ್ ಪ್ರಸ್ತುತ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಆರ್‌ಸಿಎ ಚುನಾವಣೆಯಲ್ಲಿ ಮತಗಳನ್ನು ಖರೀದಿಸಲಾಗಿದೆ ಎಂಬ ಅಂಶವನ್ನು ಆಧರಿಸಿ ನಾನು ಮಾತನಾಡುತ್ತಿದ್ದೇನೆ. ಶೇ.100ರಷ್ಟು ಮತಗಳನ್ನು ಖರೀದಿಸಲಾಗಿದೆ ಎಂದು ರಾಜೇಂದ್ರ ಗುಧಾ ದೂರಿದ್ದಾರೆ. ಡೈರಿಯಲ್ಲಿರುವ ಕೈಬರಹವನ್ನು ಅಶೋಕ್ ಗೆಹ್ಲೋಟ್ ಅವರ ಆಪ್ತ, ಆರ್‌ಟಿಡಿಸಿ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಕೈಬರಹದೊಂದಿಗೆ ಹೊಂದಿಸಬಹುದು. ಡೈರಿಯ ಕೆಲವು ಪುಟಗಳು ನಾಪತ್ತೆಯಾಗಿದ್ದು, ತಮ್ಮ ಬಳಿ ಇರುವ ಪುಟಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಡೈರಿಯಲ್ಲಿನ ವಿಷಯಗಳ ಬಗ್ಗೆ ತನಿಖೆಗಾಗಿ ಪೊಲೀಸ್ ದೂರು ಏಕೆ ನೀಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ರಾಜೇಂದ್ರ ಗುಧಾ, ನಾನು ಡೈರಿಯನ್ನು ಸದನದಲ್ಲಿ ಮಂಡಿಸಲು ಬಯಸಿದ್ದೆ. ಇಡಿ, ಸಿಬಿಐ ಮತ್ತು ಐಟಿ ಇಲಾಖೆಯಿಂದ ತನಿಖೆ ನಡೆಸುವಂತೆ ಒತ್ತಾಯಿಸಲು ನಿರ್ಧರಿಸಿದ್ದೆ. ಆದರೆ, ಮಾತನಾಡಲು ಅನುಮತಿ ನೀಡಲಿಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೇ, ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪ್ರತಿಕ್ರಿಯಿಸಿದ ಗುಧಾ, ನಾನು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಸರ್ಕಾರವೇ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುಖ್ಜೀಂದರ್ ರಾಂಧವಾ ಅವರು ಕ್ಷಮೆಯಾಚಿಸಲು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:"ಕೆಂಪು ಡೈರಿ" ಬಹಿರಂಗಕ್ಕೆ ಒತ್ತಾಯ: ಸ್ವಪಕ್ಷದ ವಿರುದ್ಧ ಹರಿಹಾಯ್ದು ಸಚಿವ ಸ್ಥಾನ ಕಳೆದುಕೊಂಡ ಕೈ ಮುಖಂಡನಿಗೆ ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ