ಮುಂಬೈ (ಮಹಾರಾಷ್ಟ್ರ): ಅಭಿಮಾನಿಗಳಿಂದ ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಭಾರತ ರತ್ನ ಸಚಿನ್ ತೆಂಡೂಲ್ಕರ್ ನಾಳೆ 50ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಈ ಹಿನ್ನೆಲೆ ಕ್ರಿಕೆಟ್ ದಂತಕಥೆಯ ಹುಟ್ಟುಹಬ್ಬಕ್ಕೆ ಮುಂಚೆಯೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಶನಿವಾರ ಸಚಿನ್ ಅಭಿಮಾನಿಗಳ ಪ್ರೀತಿಗೆ ಕಿಕ್ಕಿರಿದ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಯಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ಶನಿವಾರ ನಡೆದ ಪಂದ್ಯದ ವೇಳೆ ಸಚಿನ್ ತೆಂಡೂಲ್ಕರ್ಗೆ ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಿದರು. ಪಂದ್ಯದ ಮೊದಲ ಇನ್ನಿಂಗ್ಸ್‌ನ 10ನೇ ಓವರ್ ಮುಗಿದ ಕೂಡಲೇ ನೆರೆದಿದ್ದ ಕ್ರಿಕೆಟ್ ಪ್ರೇಕ್ಷಕರೆಲ್ಲರೂ ಒಂದೇ ಬಾರಿ ಸಚಿನ್, ಸಚಿನ್ ಎಂದು ಕೂಗಲು ಶುರು ಮಾಡಿದ್ದರಿಂದ ಇಡೀ ಸ್ಟೇಡಿಯಂನಲ್ಲಿ ಸಚಿನ್ ಹೆಸರು ಮಾರ್ದನಿಸಿತು. ಇನ್ನು ಸಚಿನ್ ತೆಂಡೂಲ್ಕರ್ ಅವರ ಐಕಾನಿಕ್ ಅದ್ಭುತ ಇನ್ನಿಂಗ್ಸ್ಗೂ ಕೂಡ 25 ವರ್ಷ ತುಂಬಿದ್ದು, ಅದರ ಸಂಭ್ರಮಾಚರಣೆಯನ್ನು ನಿನ್ನೆ ಪಂದ್ಯದ ಮಧ್ಯೆ ತಮ್ಮ ಅಭಿಮಾನಿಗಳ ಮುಂದೆ ಸಚಿನ್ ಕೇಕ್ ಕತ್ತರಿಸಿ ಆಚರಿಸಿದರು.
ಏನಿದು ಸಚಿನ್ ಅದ್ಭುತ ಇನ್ನಿಂಗ್ಸ್?:1998 ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ಮಧ್ಯೆ ಕ್ರಿಕೆಟ್ ಪಂದ್ಯವು ನಡೆದಿತ್ತು. ಈ ಪಂದ್ಯದಲ್ಲಿ ಇಂಡಿಯಾ ಟೀಂನ ಉಳಿದ ಬ್ಯಾಟ್ಸ್ಮನ್ಗಳು ಬೇಗನೇ ಔಟಾಗಿ ತಂಡ ಸೋಲುವ ಹಂತಕ್ಕೆ ಬಂದಿತ್ತು. ಆದರೆ ಈ ವೇಳೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 131 ಎಸೆತಗಳಲ್ಲಿ 143 ರನ್ ಗಳಿಸಿ ತಂಡಕ್ಕೆ ನೆರವಾದರು. ಅವರ ಈ ರನ್ ಕ್ರಿಕೆಟ್ ಇತಿಹಾಸದಲ್ಲೇ ಅಚ್ಚಳಿಯದೇ ಉಳಿದಿದೆ. ಆ ಸಾಧನೆಯ ಗಳಿಗೆಗೆ 25 ವರ್ಷ ತುಂಬಿದ್ದರಿಂದ ತಮ್ಮ ಜನ್ಮದಿನದ ಮುಂಚಿತವಾಗಿ ಅಭಿಮಾನಿಗಳ ಮುಂದೆ ಕೇಕ್ ಕಟ್ ಮಾಡಿ ಸಂಭ್ರಮಿಸಿ ಮೆಲುಕು ಹಾಕಿಕೊಂಡರು.