ಅಹಮದಾಬಾದ್(ಗುಜರಾತ್): ಭಾರತ ಎದುರಿಸುತ್ತಿರುವ ಪ್ರಮುಖ ಮಾಲಿನ್ಯ ಸಮಸ್ಯೆಗಳಲ್ಲಿ ಜಲಮಾಲಿನ್ಯ ಕೂಡ ಪ್ರಮುಖವಾದದ್ದು. ನದಿ, ಕಾಲುವೆ ಹಾಗೂ ಸಾಗರಗಳು ಕಲುಷಿತಗೊಂಡು ಜನರು ಮಾಲಿನ್ಯ ಸಂಬಂಧಿ ರೋಗರುಜಿನಗಳಿಂದ ಬಳಲುತ್ತಾರೆ. ಇದೀಗ ಸಬರಮತಿಯು ದೇಶದ ಎರಡನೇ ಅತ್ಯಂತ ಕಲುಷಿತ ನದಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಹೈಕೋರ್ಟ್, ಶುಕ್ರವಾರ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಗೆ (GPCB) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಂಶೋಧನೆಗಳ ವರದಿಗೆ ವಿವರವಾದ ಉತ್ತರವನ್ನು ನೀಡುವಂತೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೋನಿಯಾ ಗೋಕನಿ ಮತ್ತು ನ್ಯಾಯಮೂರ್ತಿ ನಾನಾವತಿ ಅವರನ್ನೊಳಗೊಂಡ ಪೀಠವು ಈ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ, ಕೂಡಲೇ ಉತ್ತರ ನೀಡುವಂತೆ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. ಇದು ಸುಮಾರು ಎರಡು ವರ್ಷಗಳ ಹಿಂದೆ ದಾಖಲಾದ ಪ್ರಕರಣವಾಗಿದ್ದು, ರಾಜ್ಯ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಶೋಧನೆಗಳ ಪ್ರಕಾರ, 'ತಮಿಳುನಾಡಿನ ಕೂವಮ್ ನದಿಯ ನಂತರ ಸಬರಮತಿ ನದಿಯು ದೇಶದ ಎರಡನೇ ಅತ್ಯಂತ ಕಲುಷಿತ ನದಿಯಾಗಿದೆ. ಗಾಂಧಿನಗರದ ರೈಸನ್‌ನಿಂದ ವೌಥಾ ಗ್ರಾಮದವರೆಗೆ ವಿಸ್ತರಿಸಿರುವ ನದಿಯ ಪ್ರತಿ ಲೀಟರ್ ನೀರಿಗೆ 292 ಮಿಲಿಗ್ರಾಂ ಜೀವರಾಸಾಯನಿಕ ಆಮ್ಲಜನಕದ ಬೇಡಿಕೆ (BOD) ಒಳಗೊಂಡಿದೆ ಎಂದು CPCB ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ:ಸಬರಮತಿ ನದಿಯಲ್ಲಿ ರಿವರ್ ಕ್ರೂಸ್ ಕಮ್ ಫ್ಲೋಟಿಂಗ್ ರೆಸ್ಟೋರೆಂಟ್: ಏಪ್ರಿಲ್ ವೇಳೆಗೆ ಆರಂಭ ಸಾಧ್ಯತೆ