ಪತ್ತನಂತಿಟ್ಟ (ಕೇರಳ): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಇಂದು ಭಕ್ತರಿಗಾಗಿ ಬಾಗಿಲು ತೆರೆದಿದೆ. ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ ನಿಮಿತ್ತ ಬಾಗಿಲು ತೆರೆಯಲಾಗಿದ್ದು, ಭಕ್ತಾದಿಗಳು ಸಾಲುಗಟ್ಟಿದ್ದರು.
ತಂತ್ರಿ ಕಾಂತಾರ ಮಹೇಶ್ ಮೋಹನರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ಕೆ.ಜಯರಾಮನ್ ನಂಬೂದಿರಿ ಅವರು ಗುರುವಾರ ಸಂಜೆ 5 ಗಂಟೆಗೆ ಬಾಗಿಲು ತೆರೆದರು. ಇದೇ ವೇಳೆ, ಮುವಾಟ್ಟುಪುಳ ಎನನಲ್ಲೂರು ಪುತಿಲ್ಲಾತ್ ಮನಯಿಲ್ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ನೂತನ ಪ್ರಧಾನ ಅರ್ಚಕರಾಗಿ (ಮೇಲ್ಶಾಂತಿ) ಹಾಗೂ ಮಾಲಿಕಪ್ಪುರಂ ಮುಖ್ಯ ಅರ್ಚಕರಾಗಿ ತ್ರಿಶೂರ್ ವಡಕೆಕಾಡ್ ಪೂಂಗಟ್ಮನದ ಪಿ.ಜಿ.ಮುರಳಿ ಅವರು ಮಹೇಶ್ ಮೋಹನರು ಅವರ ಸಮ್ಮುಖದಲ್ಲಿ ಸನ್ನಿಧಾನದಲ್ಲಿ ಅಧಿಕಾರ ಸ್ವೀಕರಿಸಿದರು.
ನಾಳೆ ಶುಕ್ರವಾರ (ನ.17) ಬೆಳಗ್ಗೆ 4 ಗಂಟೆಗೆ ನೂತನ ಪ್ರಧಾನ ಅರ್ಚಕರು ಗರ್ಭಗುಡಿಯನ್ನು ತೆರೆಯಲಿದ್ದಾರೆ. ನಂತರದ ದಿನಗಳಲ್ಲಿ ದೇವಸ್ಥಾನವು ಮುಂಜಾನೆ 4 ಗಂಟೆಗೆ ತೆರೆದು ಮಧ್ಯಾಹ್ನ 1 ಗಂಟೆಗೆ ಮುಚ್ಚಲಿದೆ. ಬಳಿಕ ಸಂಜೆ 4 ಗಂಟೆಗೆ ಮತ್ತೆ ದೇವಸ್ಥಾನ ತೆರೆಯಲಿದ್ದು, ರಾತ್ರಿ 11 ಗಂಟೆಗೆ ಮುಚ್ಚುತ್ತದೆ. ಡಿಸೆಂಬರ್ 27ರಂದು ಮಂಡಲ ಪೂಜೆ ಇರುತ್ತದೆ. ಧಾರ್ಮಿಕ ವಿಧಿ ವಿಧಾನಗಳ ನಂತರ ರಾತ್ರಿ 10 ಗಂಟೆಗೆ ದೇವಸ್ಥಾನ ಮುಚ್ಚಲಿದೆ. ಡಿಸೆಂಬರ್ 30ರ ಸಂಜೆ ಮಕರವಿಳಕ್ಕು ಉತ್ಸವಕ್ಕಾಗಿ ದೇವಾಲಯವು ಪುನಃ ತೆರೆಯಲ್ಪಡುತ್ತದೆ.