ಪತ್ತನಂತಿಟ್ಟ(ಕೇರಳ): ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆಂದು ತಮಿಳುನಾಡಿನಿಂದ ಪಂಪಾಕ್ಕೆ ಬಂದಿದ್ದ ಭಕ್ತರ ಗುಂಪೊಂದು ಒಂಬತ್ತು ವರ್ಷದ ಬಾಲಕಿಯನ್ನು ಬಸ್ಸಿನಲ್ಲಿಯೇ ಮರೆತ ಘಟನೆ ನಡೆದಿದೆ. ತಮಿಳುನಾಡು ಮೂಲದ ನಾಲ್ಕನೇ ತರಗತಿ ವಿದ್ಯಾರ್ಥಿನಿ ತನ್ನ ತಂದೆ, ತಾತ ಮತ್ತು ಇತರೆ ಯಾತ್ರಿಕರೊಂದಿಗೆ ಆಂಧ್ರಪ್ರದೇಶದ ಸರ್ಕಾರಿ ಬಸ್‌ನಲ್ಲಿ ಅಯ್ಯಪ್ಪನ ದರ್ಶನಕ್ಕೆ ಬಂದಿದ್ದರು.
ಪಂಪಾದಲ್ಲಿ ಎಲ್ಲರೂ ಇಳಿದಿದ್ದಾರೆ, ಆಗ ಬಾಲಕಿ ನಾಪತ್ತೆಯಾಗುರುವುದು ತಿಳಿದುಬಂದಿದೆ. ತಕ್ಷಣ ಬಾಲಕಿಯ ತಂದೆ ಪಂಪಾದಲ್ಲಿರುವ ಪೊಲೀಸ್ ಕಂಟ್ರೋಲ್ ರೂಂಗೆ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಈ ಕುರಿತು ಸಂಚಾರಿ ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ. ಸಂದೇಶವನ್ನು ಸ್ವೀಕರಿಸಿದ ಅಟಿಂಗಲ್ ಎಎಂವಿಐ ಆರ್ ರಾಜೇಶ್ ಮತ್ತು ನಿಲಕ್ಕಲ್ - ಪಂಪಾ ಮಾರ್ಗದಲ್ಲಿ ಗಸ್ತಿನಲ್ಲಿದ್ದ ಕುನ್ನತ್ತೂರು ಎಎಂವಿಐ ಜಿ.ಅನಿಲ್‌ಕುಮಾರ್ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದರು.
ಈ ವೇಳೆ ಆಂಧ್ರಪ್ರದೇಶದ ಬಸ್ ಈ ಮಾರ್ಗದಲ್ಲಿ ತೆರಳುತ್ತಿರುವುದನ್ನು ಗುರುತಿಸಿದ್ದಾರೆ. ಸಂಚಾರಿ ಪೊಲೀಸರು ಬಸ್ಅನ್ನು ತಡೆದು ನಿಲ್ಲಿಸಿ ಚಾಲಕ ಮತ್ತು ಕಂಡಕ್ಟರ್ ಬಳಿ ಬಾಲಕಿ ಬಗ್ಗೆ ವಿಚಾರಿಸಿದ್ದಾರೆ. ಅವರು, ಎಲ್ಲರೂ ಪಂಪಾದಲ್ಲೇ ಇಳಿದಿದ್ದಾರೆ, ಬಸ್‌ನಲ್ಲಿ ಯಾರೂ ಇಲ್ಲ, ಬಸ್ಸನ್ನು ನಿಲಕ್ಕಲ್ನಲ್ಲಿ ಪಾರ್ಕಿಂಗ್ ಮಾಡಲು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಂತರ ಪೊಲೀಸರು ಬಸ್ನ ಒಳಗೆ ಪರಿಶೀಲಿಸಿದಾಗ ಬಾಲಕಿ ಬಸ್ಸಿನ ಹಿಂದಿನ ಸೀಟಿನಲ್ಲಿ ಮಲಗಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಕಂಟ್ರೋಲ್ ರೂಂಗೆ ಕರೆತರಲಾಗಿದೆ.