ತಿರುವನಂತಪುರಂ (ಕೇರಳ) :ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಶಬರಿಮಲೆಗೆ ಭಕ್ತರು ಧಾವಿಸಿದ್ದು, ಅದನ್ನು ನಿಯಂತ್ರಿಸಲು ಕೇರಳ ಸರ್ಕಾರ ವಿಫಲವಾಗಿದೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟರೆ, ಇನ್ನೊಂದು ಅವಘಡದಲ್ಲಿ ಯಾತ್ರಿಕನೊಬ್ಬ ಅಸುನೀಗಿದ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಭಾರೀ ಜನದಟ್ಟಣೆಯಿಂದ ಬೇಸತ್ತ ಭಕ್ತರು ಪ್ರತಿಭಟನೆ ಕೂಡ ನಡೆಸಿದರು. ಈ ಮಧ್ಯೆ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸರದಿಯಲ್ಲಿ ನಿಂತಿದ್ದ ಬಾಲಕಿ ಸಾವು:ಸರತಿ ಸಾಲಿನಲ್ಲಿ ನಿಂತಿದ್ದ 11 ವರ್ಷದ ಬಾಲಕಿ ಕುಸಿದು ಬಿದ್ದು ಪ್ರಾಣ ಸಾವನ್ನಪ್ಪಿದ್ದಾಳೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಆಕೆ ಅಯ್ಯಪ್ಪನ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದಳು. ಭಾರೀ ಜನಸಂಖ್ಯೆ ಜಮಾಯಿಸಿದ್ದ ಕಾರಣ ದರ್ಶನ ವಿಳಂಬವಾಗಿತ್ತು. ಈ ವೇಳೆ ನಿತ್ರಾಣಗೊಂಡ ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಯೋಜನವಾಗಿಲ್ಲ. ಬಾಲಕಿಯು ಮೊದಲು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು.
ಬಸ್ ಹತ್ತುವಾಗ ಯಾತ್ರಿಕ ದುರ್ಮರಣ:ಬಸ್ ಹತ್ತುವಾಗ ನಡೆದ ಅವಘಡದಲ್ಲಿ ಅಯ್ಯಪ್ಪಸ್ವಾಮಿ ಭಕ್ತರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಪೆರುನಾಡಿನ ಕೂನಂಕಾರದಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿತ್ತು. ಈ ವೇಳೆ ತಮಿಳುನಾಡು ಮೂಲದ ಪೆರಿಯಸ್ವಾಮಿ (54) ಎಂಬುವರು ಹಸಿದ ಕಾರಣ ಊಟ ಮಾಡಲು ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ಬಸ್ ಚಲಿಸಲು ಆರಂಭಿಸಿದೆ. ಇದನ್ನು ಕಂಡ ಪೆರಿಯಸ್ವಾಮಿ ಬಸ್ ಹತ್ತಲು ಹಿಂದೆಯೇ ಓಡಿದ್ದಾರೆ. ಆದರೆ, ದುರಾದೃಷ್ಟವಶಾತ್ ಎಡವಿ ರಸ್ತೆ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಯಲಿಲ್ಲ.