ತಿರುವನಂತಪುರ(ಕೇರಳ):ಕಳೆದ ಕೆಲ ತಿಂಗಳಿಂದ ಬಂದ್ ಆಗಿದ್ದ ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಇಂದಿನಿಂದ ಭಕ್ತರ ದರ್ಶನಕ್ಕಾಗಿ ಓಪನ್ ಆಗಲಿದೆ. ಜುಲೈ 21ರವರೆಗೆ ಭಕ್ತರು ಇಲ್ಲಿಗೆ ತೆರಳಬಹುದಾಗಿದೆ ಎಂದು ತಿರುವಾಂಕೂರು ದೇವಸಂ ಮಂಡಳಿ ಈಗಾಗಲೇ (ಟಿಡಿಬಿ) ಮಾಹಿತಿ ಹಂಚಿಕೊಂಡಿದೆ.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿರುವ ಪ್ರಮಾಣ ಪತ್ರ ಹಾಗೂ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು ಎಂದಿದೆ. RTPCR ರಿಪೋರ್ಟ್ 48 ಗಂಟೆಯೊಳಗೆ ಮಾಡಿಸಿದ್ದಾಗಿರಬೇಕು ಎಂದು ತಿಳಿಸಲಾಗಿದೆ. ಪ್ರತಿದಿನ 5 ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಆನ್ಲೈನ್ ಬುಕ್ಕಿಂಗ್ಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿರಿ: ಬಾವಿಯಲ್ಲಿ ಬಿದ್ದ ಬಾಲಕಿ ರಕ್ಷಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ 11 ಮಂದಿ
ಪ್ರಮುಖವಾಗಿ ದೇಗುಲದ ಆವರಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಕೇರಳದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣ ಕಳೆದ ಕೆಲ ತಿಂಗಳಿಂದ ಅಯ್ಯಪ್ಪನ ದೇವಸ್ಥಾನ ಸಂಪೂರ್ಣವಾಗಿ ಬಂದ್ ಆಗಿದ್ದು, ಅಲ್ಲಿನ ಅರ್ಚಕರು ಪೂಜೆ ನಡೆಸುತ್ತಿದ್ದಾರೆ. ಇದೀಗ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದ್ದ ಸಂದರ್ಭದಲ್ಲೂ ಇದೇ ರೀತಿಯ ಅವಕಾಶ ನೀಡಲಾಗಿತ್ತು. ಆದರೆ 2ನೇ ಹಂತದ ಕೋವಿಡ್ ಅಲೆ ದಿಢೀರ್ ಆಗಿ ಹೆಚ್ಚಾಗುತ್ತಿದ್ದಂತೆ ದೇವಸ್ಥಾನ ಬಂದ್ ಮಾಡಲಾಗಿತ್ತು.
ಕೇರಳದಲ್ಲಿ ಈಗಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಇಂದು ಮತ್ತು ನಾಳೆ ಸಂಪೂರ್ಣ ಲಾಕ್ಡೌನ್ ಹೇರಿಕೆ ಮಾಡಲಾಗಿದೆ. ಇದರ ಮಧ್ಯೆ ಕೂಡ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಲಾಗಿದೆ.