ನವದೆಹಲಿ:'ಸಾರೇ ಜಹಾನ್ ಸೇ ಅಚ್ಚಾ ಹಿಂದೂಸ್ತಾನ್ ಹಮಾರಾ' ಪ್ರಸಿದ್ಧ ದೇಶಭಕ್ತಿ ಗೀತೆ ಬರೆದ ಪಾಕಿಸ್ತಾನದ ರಾಷ್ಟ್ರಕವಿ ಮೊಹಮ್ಮದ್ ಇಕ್ಬಾಲ್ ಅವರ ಕುರಿತ ಅಧ್ಯಾಯವನ್ನು ಬಿಎ ರಾಜ್ಯಶಾಸ್ತ್ರದ ಪಠ್ಯಕ್ರಮದಿಂದ ತೆಗೆದುಹಾಕುವ ನಿರ್ಣಯವನ್ನು ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಅಂಗೀಕರಿಸಿದೆ. ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕೌನ್ಸಿಲ್ನಲ್ಲಿದ್ದ ಐದು ಸದಸ್ಯರನ್ನು ಹೊರತಪಡಿಸಿ ಉಳಿದ ಎಲ್ಲರೂ ಈ ನಿರ್ಣಯಕ್ಕೆ ಸಮ್ಮತ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಪಾಕಿಸ್ತಾನದ ಕಲ್ಪನೆಗೆ ಜನ್ಮ ನೀಡಿದ ಕೀರ್ತಿಗೆ ಪಾತ್ರರಾದ ಮುಹಮ್ಮದ್ ಅಲ್ಲಾಮ ಇಕ್ಬಾಲ್ ಅವರು 1877 ರಲ್ಲಿ ಅವಿಭಜಿತ ಭಾರತದಲ್ಲಿ ಜನಿಸಿದರು. 'ಮಾಡರ್ನ್ ಇಂಡಿಯನ್ ಪೊಲಿಟಿಕಲ್ ಥಾಟ್' ಶೀರ್ಷಿಕೆಯ ಅಧ್ಯಾಯವು ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಆರನೇ ಸೆಮಿಸ್ಟರ್ ಪತ್ರಿಕೆಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ 1014ನೇ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಪದವಿಪೂರ್ವ ಕೋರ್ಸ್ ಕುರಿತು ಚರ್ಚೆಯ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತವನ್ನು ಒಡೆಯಲು ಅಡಿಪಾಯ ಹಾಕಿದವರು ಪಠ್ಯಕ್ರಮದಲ್ಲಿ ಇರಬಾರದು ಎಂದು ಉಪಕುಲಪತಿ ಪ್ರೊಫೆಸರ್ ಯೋಗೇಶ್ ಸಿಂಗ್ ಹೇಳಿದ್ದಾರೆ.
ಉಪಕುಲಪತಿಗಳ ಪ್ರಸ್ತಾವನೆಯನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿತು. ಸಭೆಯಲ್ಲಿ, ಪದವಿ ಪೂರ್ವ ಪಠ್ಯಕ್ರಮ ಚೌಕಟ್ಟು (ಯುಜಿಸಿಎಫ್) 2022 ರ ಅಡಿಯಲ್ಲಿ ವಿವಿಧ ಕೋರ್ಸ್‌ಗಳ ನಾಲ್ಕು, ಐದನೇ ಮತ್ತು ಆರನೇ ಸೆಮಿಸ್ಟರ್‌ಗಳ ಪಠ್ಯಕ್ರಮದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಉಪಕುಲಪತಿಗಳು ಡಾ.ಭೀಮರಾವ್ ಅಂಬೇಡ್ಕರ್ ಮತ್ತು ಇತರರ ಕುರಿತ ಬೋಧನೆಗೆ ಒತ್ತು ನೀಡಿದರು.
ಇನ್ನು ಮುಂದೆ ಮೊಹಮ್ಮದ್ ಇಕ್ಬಾಲ್ ಅವರ ಕುರಿತ ಅಧ್ಯಾಯವನ್ನು ಬಿಎ ರಾಜ್ಯಶಾಸ್ತ್ರ ಕೋರ್ಸ್‌ನಲ್ಲಿ ಕಲಿಸಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಮಾಧ್ಯಮ ಪ್ರಭಾರಿ ಪ್ರೊಫೆಸರ್ ರಾಜೇಶ್ ಝಾ ಹೇಳಿದ್ದಾರೆ. ಅಧ್ಯಾಯದಲ್ಲಿ ಏನಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇದರ ಹೊರತಾಗಿ ಬೇರೆ ಯಾವುದನ್ನೂ ಕಲಿಸುವುದಿಲ್ಲ. ಅದನ್ನು ಅಕಾಡೆಮಿಕ್ ಕೌನ್ಸಿಲ್ ಅಂಗೀಕರಿಸಿದೆ ಎಂದು ತಿಳಿಸಿದರು.