ಪುಣೆ: "ಪಾಂಡವರು ಕೂಡಾ ತಮ್ಮ ಸಂಬಂಧಿಗಳನ್ನು ಆಯ್ಕೆ ಮಾಡಲಿಲ್ಲ. ಭೌಗೋಳಿಕ ನೆರೆಹೊರೆ ದೇಶಗಳ ಆಯ್ಕೆ ವಿಚಾರದಲ್ಲಿ ಭಾರತಕ್ಕೂ ಇದು ಸಾಧ್ಯವಾಗದು" ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು. ನಮ್ಮ ನೆರೆ ದೇಶ ಅಣ್ವಸ್ತ್ರ ಹೊಂದಿರುವ ಕಪಟಿ ಪಾಕಿಸ್ತಾನ ನಮಗೆ ಆಸ್ತಿಯೋ ಅಥವಾ ಬಾಧ್ಯತೆಯೇ ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. "ಇದು ಇಂದಿನ ವಾಸ್ತವತೆ. ಆದರೆ ಒಳ್ಳೆಯ ವಿಚಾರಗಳು ಮೇಲುಗೈ ಸಾಧಿಸಬಹುದು ಎಂಬ ನಿರೀಕ್ಷೆ ನಮ್ಮದು" ಎಂದರು.
ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ: ಲಡಾಕ್‌ನಲ್ಲಿ ಭಾರತ ತನ್ನ 65 ಗಸ್ತು ಕೇಂದ್ರಗಳ ಪೈಕಿ 26 ಅನ್ನು ಈಗಾಗಲೇ ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಹಿರಿಯ ಅಧಿಕಾರಿಯೊಬ್ಬರ ವರದಿಯನ್ನು ಉಲ್ಲೇಖಿಸಿ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಜೈಶಂಕರ್, "ವಿರೋಧ ಪಕ್ಷದ ನಾಯಕರು ಹೇಳುವ ಅತಿಕ್ರಮಣ ವಿಚಾರ 1962 ರಲ್ಲಿ ಆಗಿದ್ದು" ಎಂದರು. ಜವಾಹರ್ ಲಾಲ್ ನೆಹರು ಅವರು ದೇಶದ ಪ್ರಧಾನಿಯಾಗಿದ್ದಾಗ ನಡೆದ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ಜೈಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಸಚಿವರು, "ಕೆಲವೊಮ್ಮೆ ಸುಳ್ಳು ಎಂದು ಗೊತ್ತಿದ್ದರೂ ಅವರು ಅಂಥ ಸುದ್ದಿಗಳನ್ನು ಹರಡುತ್ತಾರೆ. 1962ರಲ್ಲಿ ನಡದೆ ಘಟನೆಗಳನ್ನು ಅವರು ಈಗ ನಡೆದಿರುವಂತೆ ಬಿಂಬಿಸುತ್ತಿದ್ದಾರೆ. ಆದರೆ ಅಂದು ನಡೆದ ನಿಜ ಸಂಗತಿಯನ್ನು ಅವರು ಮಾತನಾಡಲಾರರು" ಎಂದರು.
ವಿದೇಶಿ ಮಾಧ್ಯಮಗಳಿಗೆ ಛೀಮಾರಿ: ಗೋಧ್ರೋತ್ತರ ಗಲಭೆ ಕುರಿತು ಆಂಗ್ಲ ಮಾಧ್ಯಮ ಬಿಬಿಸಿ ಚಿತ್ರಿಸಿರುವ ವಿವಾದಿತ ಸಾಕ್ಷ್ಯಚಿತ್ರ ದೇಶದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದೇಶಿ ಮಾಧ್ಯಮಗಳು ಭಾರತ ಸರ್ಕಾರಕ್ಕೆ, "ಹಿಂದು ಹಣೆಪಟ್ಟಿ" ಕಟ್ಟಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಛೀಮಾರಿ ಹಾಕಿದ್ದಾರೆ. ಅಮೆರಿಕ, ಯುರೋಪ್ ರಾಷ್ಟ್ರಗಳ ಸರ್ಕಾರಗಳಿಗೆ "ಕ್ರಿಶ್ಚಿಯನ್ ನ್ಯಾಷನಲಿಸ್ಟ್ಎಂದು ಹೇಳಬಲ್ಲಿರಾ" ಎಂದು ಪ್ರಶ್ನಿಸಿದ್ದಾರೆ.
"ವಿದೇಶಿ ಮಾಧ್ಯಮಗಳಲ್ಲಿ ಭಾರತ ಸರ್ಕಾರವನ್ನು ಹಿಂದು ರಾಷ್ಟ್ರೀಯವಾದಕ್ಕೆ ಹೋಲಿಸಲಾಗುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಸರ್ಕಾರಗಳು ಕ್ರಿಶ್ಚಿಯಾನಿಟಿ ಆಧರಿತವಾಗಿವೆ ಎಂದು ಹೇಳುವುದಿಲ್ಲ. ಭಾರತಕ್ಕೆ ಮಾತ್ರ ಈ ಗುಣವಿಶೇಷಗಳನ್ನು ಸೀಮಿತವಾಗಿಸಿದ್ದಾರೆ. ನಮ್ಮ ದೇಶ ಪ್ರಪಂಚದ ಯಾವ ರಾಷ್ಟ್ರಗಳಿಗೂ ಕಡಿಮೆ ಇಲ್ಲ. ವಿಶ್ವಕ್ಕಿಂತಲೂ ಯಾವುದರಲ್ಲೂ ಹಿಂದೆ ಇಲ್ಲ" ಎಂದು ಪ್ರತಿಪಾದಿಸಿದರು.
ಇದಕ್ಕೂ ಮುನ್ನ ಜೈಶಂಕರ್ ವಿರಚಿತ ಇಂಗ್ಲಿಷ್ ಪುಸ್ತಕವಾದ, "ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್" ಮರಾಠಿ ಭಾಷೆಗೆ "ಭಾರತ್ ಮಾರ್ಗ್" ಎಂದು ಅನುವಾದವಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಿಡುಗಡೆ ಮಾಡಿದರು.