ತಿರುನೆಲ್ವೇಲಿ (ತಮಿಳುನಾಡು):ದೇಶದ ಅತಿದೊಡ್ಡ ಪರಮಾಣು ವಿದ್ಯುತ್ ಯೋಜನೆಯಾದ ಕೂಡಂಕುಳಂನಲ್ಲಿ ಮೂರನೇ ಮತ್ತು ನಾಲ್ಕನೇ ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದ್ದ ರಷ್ಯಾ ವಿಜ್ಞಾನಿಗಳ ಮುಖಂಡರಾಗಿದ್ದ ಕ್ಲಿನಿನ್ ಗೋ ವಾಡಿನ್ (55) ಸೋಮವಾರ ರಾತ್ರಿ 9.30 ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯಕ್ಕೀಡಾದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಸೋಮವಾರ ರಾತ್ರಿಯೇ ಅವರು ಅಸ್ವಸ್ಥತೆಯ ಬಗ್ಗೆ ತಿಳಿಸಿದ್ದರು. ಬಳಿಕ ತೀವ್ರ ಹೃದಯಾಘಾತಕ್ಕೀಡಾಗಿದ್ದರು. ಸಿಬ್ಬಂದಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವಿಧಿಯಾಟದ ಮುಂದೆ ವಾಡಿನ್ ನಿಲ್ಲಲಿಲ್ಲ. ವೈದ್ಯರು ಪರೀಕ್ಷಿಸಿದ ಬಳಿಕ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ರಷ್ಯಾ ರಾಯಭಾರ ಕಚೇರಿಯ ಮೂಲಕ ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ತಮಿಳುನಾಡಿನ ಕೂಡಂಕುಳಂನಲ್ಲಿರುವ ಪರಮಾಣು ವಿದ್ಯುತ್ ಘಟಕದಲ್ಲಿ 3 ಮತ್ತು 4 ನೇ ಸ್ಥಾವರ ಸ್ಥಾಪನೆಯ ಕಾರ್ಯ ನಡೆಯುತ್ತಿದೆ. ಐದು ವರ್ಷಗಳಿಂದ ಇದು ಅಭಿವೃದ್ಧಿಯಲ್ಲಿದೆ. ವಿವಿಧ ವಿಜ್ಞಾನಿಗಳು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನಿಗಳ ತಂಡಕ್ಕೆ ಕ್ಲಿನಿನ್ ಗೋ ವಾಡಿನ್ ಮುಖ್ಯಸ್ಥರಾಗಿದ್ದರು. ಇದೀಗ ಅವರು ಅಸುನೀಗಿದ್ದು, ದೊಡ್ಡ ನಷ್ಟ ಉಂಟಾಗಿದೆ.
ಪರಮಾಣು ರಿಯಾಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಲಿನಿನ್ ಗೋ ವಾಡಿನ್ ಅವರ ಸಾವು ವಿಜ್ಞಾನ ಲೋಕಕ್ಕೆ ದೊಡ್ಡ ಆಘಾತ. ಅವರಂತಹ ವಿಜ್ಞಾನಿಯನ್ನು ಕಳೆದುಕೊಂಡಿರುವುದು ಇಡೀ ಕೆಕೆಎನ್‌ಪಿಪಿ ಮತ್ತು ರಷ್ಯಾಕ್ಕೆ ದೊಡ್ಡ ಷ್ಟವಾಗಿದೆ ಎಂದು ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.