ನವದೆಹಲಿ:800ಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಪ್ರಯೋಜನವಾಗಿದ್ದಜೆಇಇ ಪರೀಕ್ಷಾ ಸಾಫ್ಟ್‌ವೇರ್ ಹ್ಯಾಕ್ ಮಾಡಿದ ಆರೋಪದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ರಷ್ಯಾದ ಪ್ರಜೆ ಮಿಖಾಯಿಲ್ ಶಾರ್ಗೆನ್‌ಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ (2021) ಅಕ್ಟೋಬರ್ 3 ರಂದು ಬಂಧಿತನಾಗಿದ್ದ ಶಾರ್ಗೆನ್(25) ಜೆಇಇ (ಮುಖ್ಯ)-2021 ಪರೀಕ್ಷೆಯನ್ನು ನಡೆಸುವ iLeon ಸಾಫ್ಟ್‌ವೇರ್ ಅನ್ನು ಹ್ಯಾಕ್ ಮಾಡಿದ್ದ ಮತ್ತು ಪರೀಕ್ಷೆಯ ಸಮಯದಲ್ಲಿ ಶಂಕಿತ ಅಭ್ಯರ್ಥಿಗಳ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹ್ಯಾಕ್ ಮಾಡಲು ಇತರ ಆರೋಪಿಗಳಿಗೆ ಸಹಾಯ ಮಾಡಿದ್ದನು ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ:ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ₹94.71 ಲಕ್ಷ ಹಣ ಎಗರಿಸಿದ್ದ ಮೂವರ ಬಂಧನ
ಅಭ್ಯರ್ಥಿಗಳು ಮತ್ತು ಅವರ ಪೋಷಕರನ್ನು ನೇರವಾಗಿ ಸಂಪರ್ಕಿಸಿ ಹಣ ಮತ್ತು ದಾಖಲೆಗಳನ್ನು ಪಡೆದವರು ಸೇರಿದಂತೆ ಪ್ರಕರಣದ ಇತರ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ವಿಶೇಷ ಸಿಬಿಐ ನ್ಯಾಯಾಲಯವು ಗಮನಿಸಿದೆ. ಸಾಫ್ಟ್‌ವೇರ್ ಹ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಶಾರ್ಗೆನ್‌ನ ಪಾತ್ರವು ಇತರ ಆರೋಪಿಗಳಿಗೆ ಸರಿಸಮಾನವಾಗಿಲ್ಲ ಎಂಬ ಸಿಬಿಐನ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಷರತ್ತು ಬದ್ಧ ಜಾಮೀನು:ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಮತ್ತು ಸಹ - ಆರೋಪಿಗಳೊಂದಿಗೆ ಅರ್ಜಿದಾರರ ಕೆಲವು ಮೊಬೈಲ್ ಚಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಸಿಬಿಐ ವಾದದಲ್ಲಿ ಹುರುಳಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಶ್ಯೂರಿಟಿ ಮತ್ತು ಜಾಮೀನು ಷರತ್ತುಗಳೊಂದಿಗೆ ಶಾರ್ಗೆನ್ ಅವರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.