ನವದೆಹಲಿ:ರಷ್ಯಾ - ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು ಸೆಮಿಕಂಡಕ್ಟರ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಚಿಪ್ಗಳ ತಯಾರಿಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ರಷ್ಯಾ- ಉಕ್ರೇನ್ ಸಂಘರ್ಷವು ಸೆಮಿಕಂಡಕ್ಟರ್ ಉದ್ಯಮ ಸೇರಿದಂತೆ ಹಲವಾರು ವಲಯಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಚಿಪ್ಗಳ ತಯಾರಿಕೆಗೆ ಬೇಕಾದ ನಿಯಾನ್ ಮತ್ತು ಹೆಕ್ಸಾಫ್ಲೋರೊಬ್ಯುಟಡೀನ್ ಅನಿಲಗಳ ಪೂರೈಕೆಯು ಸ್ಥಗಿತಗೊಂಡ ಪರಿಣಾಮ ಚಿಪ್ಗಳ ಕೊರತೆ ಉಂಟಾಗಲಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಿಯಾನ್ ಮತ್ತು ಹೆಕ್ಸಾಫ್ಲೋರೊಬುಟಾಡೀನ್ ಅನಿಲಗಳನ್ನು ಪೂರೈಕೆ ಮಾಡುವ ಪ್ರಮುಖ ಮೂಲಗಳಾಗಿವೆ. ಈಗಾಗಲೇ ಕೋವಿಡ್ ಅವಧಿಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಜಾಗತಿಕವಾಗಿ ಸೆಮಿ ಕಂಡಕ್ಟರ್ ಉದ್ಯಮ ಕೊರತೆ ಎದುರಿಸಿತ್ತು. ಇದೀಗ ರಷ್ಯಾ-ಉಕ್ರೇನ್ ಸಂಘರ್ಷವು ಹೆಚ್ಚುವರಿ ಸಮಸ್ಯೆ ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.