ಲಖನೌ(ಉತ್ತರಪ್ರದೇಶ):ಉಕ್ರೇನ್‌ನ ರಾಜಧಾನಿ ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಸಿಲುಕಿದ್ದು, ಅಲ್ಲಿನ ನೈಜ ಚಿತ್ರಣವನ್ನು ವಿದ್ಯಾರ್ಥಿನಿ ವಿಡಿಯೋ ಮೂಲಕ ವಿವರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಗರಿಮಾ ಮಿಶ್ರಾ ಎಂಬ ವಿದ್ಯಾರ್ಥಿನಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಹೇಳುವುದರ ಜೊತೆಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಗರಿಮಾ ಲಖನೌದ ನಿವಾಸಿಯಾಗಿದ್ದಾರೆ. ನಾನು ಮತ್ತು ನನ್ನ ಸ್ನೇಹಿತರು ಕೀವ್ ನಗರದಲ್ಲಿ ಸಿಲುಕಿಕೊಂಡಿದ್ದೇವೆ.
ಸ್ವಲ್ಪ ಸಮಯದ ಹಿಂದೆ ನಾವು ಇಲ್ಲಿಂದ ರೈಲು, ಬಸ್ ಅಥವಾ ಕಾರಿನಿಂದ ಹೋಗೋಣ ಎಂದು ಯೋಚಿಸಿದ್ದೆವು. ಆದರೆ, ನನ್ನ ಕೆಲವು ಸ್ನೇಹಿತರು ಕಾರಿನ ಮೂಲಕ ಈಗಾಗಲೇ ಹೋಗಿದ್ದು, ಅವರನ್ನು ರಷ್ಯಾದ ಸೈನ್ಯವು ತಡೆದು ಅವರ ಮೇಲೆ ಗುಂಡು ಹಾರಿಸಿದೆ ಎನ್ನಲಾಗ್ತಿದೆ.
ಭಾರತೀಯ ಹುಡುಗಿಯರನ್ನು ಎಲ್ಲಿಗೋ ಕರೆದುಕೊಂಡು ಹೋಗಿದ್ದು, ಇನ್ನೊಂದೆಡೆ ರೊಮೇನಿಯನ್ ಸೈನ್ಯವು ನಮ್ಮನ್ನು ಕೊಲ್ಲುತ್ತಿದೆ ಎಂದು ವಿಡಿಯೋದಲ್ಲಿ ಗರಿಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಹಾಯ ಸಿಗುತ್ತಿಲ್ಲ:ನಮಗೆ ಇಲ್ಲಿ ಯಾರಿಂದಲೂ ಯಾವುದೇ ಸಹಾಯ ದೊರೆಯುತ್ತಿಲ್ಲ. ರಾಯಭಾರ ಕಚೇರಿಗೆ ನಿರಂತರವಾಗಿ ಕರೆ ಮಾಡಲಾಗುತ್ತಿದೆ. ಆದರೆ, ಯಾರೂ ಕರೆ ಸ್ವೀಕರಿಸುತ್ತಿಲ್ಲ. ಯೋಗಿಜೀ, ಮೋದಿ ಜೀ ನೀವು ನಮ್ಮನ್ನು ಉಳಿಸುತ್ತೀರಿ ಎಂದು ನಾವು ನಂಬಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಗರಿಮಾ ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
ಉಕ್ರೇನ್ನಲ್ಲಿದ್ದಾರೆ ಯುಪಿಯ 1,100ಕ್ಕೂ ಹೆಚ್ಚು ನಾಗರಿಕರು : ಮಾಹಿತಿಯ ಪ್ರಕಾರ, ಉತ್ತರಪ್ರದೇಶದ ಸುಮಾರು 1,173 ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಎನ್ನಲಾಗ್ತಿದೆ. ಸರ್ಕಾರದ ಹೇಳಿಕೆಯನ್ನು ನಂಬುವುದಾದರೆ, ಎರಡು ವಿಮಾನಗಳ ಮೂಲಕ ಇಲ್ಲಿನ 66 ನಾಗರಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ.