ನವದೆಹಲಿ: ಇಂದು ಕೂಡ ರೂಪಾಯಿ ಮೌಲ್ಯದಲ್ಲಿನ ಕುಸಿತ ಮುಂದುವರೆದಿದ್ದು, ರೂಪಾಯಿ ಕಳೆದ ವಾರದ ಕನಿಷ್ಠ ಮಟ್ಟದಿಂದ ಮತ್ತಷ್ಟು ಕೆಳಕ್ಕಿಳಿದಿದೆ. ಸೋಮವಾರ ಬೆಳಗ್ಗೆ ಜೀವಮಾನದ ಮತ್ತೊಂದು ಕನಿಷ್ಠ ಮಟ್ಟಕ್ಕೆ ತಲುಪಿದೆ. ಯುಎಸ್ ಡಾಲರ್ ಸೂಚ್ಯಂಕ ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತ ನಿರಂತರವಾಗಿ ಮುಂದುವರೆದಿದೆ. ಡಾಲರ್‌ನಂಥ ಸುರಕ್ಷಿತ ಕರೆನ್ಸಿಗೆ ಬೇಡಿಕೆಯು ಇನ್ನೂ ಹೆಚ್ಚಾಗಲಿದೆ ಎಂಬ ಭರವಸೆಯ ಮೇಲೆ ಡಾಲರ್ ಸೂಚ್ಯಂಕ ಬಲವಾಗುತ್ತಿದೆ.
ಇಂದು ಬೆಳಗ್ಗೆ ಯುಎಸ್ ಡಾಲರ್ ಎದುರು ರೂಪಾಯಿ 81.50 ದಾಟಿದೆ. ಶುಕ್ರವಾರ ಅದು 81.25 ಕ್ಕೆ ಕೊನೆಗೊಂಡಿತ್ತು. ಕಳೆದ ಗುರುವಾರದ ಇಳಿಕೆಯು ಫೆಬ್ರವರಿ 24 ರ ನಂತರ ರೂಪಾಯಿಯ ಅತಿದೊಡ್ಡ ಏಕದಿನ ಕುಸಿತವಾಗಿದೆ ಎಂಬುದು ಗಮನಾರ್ಹ.
ಯುಎಸ್ ಫೆಡರಲ್ ರಿಸರ್ವ್ ಹೊಸದಾಗಿ ಬಿಗಿಯಾದ ವಿತ್ತೀಯ ನೀತಿ ನಿಯಂತ್ರಕ ಕ್ರಮಗಳನ್ನು ಜಾರಿ ಮಾಡಿದ್ದು ಕೂಡ ಡಾಲರ್ಗೆ ಬೆಂಬಲ ನೀಡಿದೆ. ಈ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಇತರ ಕರೆನ್ಸಿಗಳು ದುರ್ಬಲವಾಗುತ್ತಿವೆ.
ಬಡ್ಡಿದರ ಏರಿಕೆ ಚಕ್ರಗಳು ಮತ್ತು ಹಣದುಬ್ಬರದಿಂದ ರಕ್ಷಣೆ ಪಡೆಯುವ ಕಾರಣಗಳಿಂದ ಅತ್ಯಧಿಕ ಖರೀದಿಗೆ ಸಾಕ್ಷಿಯಾದ ಡಾಲರ್ ಸೂಚ್ಯಂಕದಿಂದ ಆತಂಕ ಸೃಷ್ಟಿಯಾಗಿದೆ. ಹಣದುಬ್ಬರದ ವಿಚಾರದಲ್ಲಿ ಉತ್ತಮ ಸೂಚನೆಗಳು ಕಂಡುಬರುವವರೆಗೂ ರೂಪಾಯಿ ಇಳಿಕೆ ಮುಂದುವರಿಯಲಿದೆ. ಮುಂದಿನ ವಾರ ಆರ್ಬಿಐ ನೀತಿ ಪ್ರಕಟಗೊಳ್ಳಲಿದ್ದು ರೂಪಾಯಿ ಕುಸಿತದ ತಡೆಗೆ ಕ್ರಮಗಳನ್ನು ನಿರೀಕ್ಷಿಸಲಾಗಿದೆ. ಆರ್ಬಿಐ ನೀತಿಗಳ ಪ್ರಕಟಣೆಗೂ ಮುನ್ನ ರೂಪಾಯಿ 80.50-81.55 ಮಧ್ಯದಲ್ಲಿ ಚಲಿಸುತ್ತಿರಬಹುದು ಎಂದು ಎಲ್ಕೆಪಿ ಸೆಕ್ಯೂರಿಟೀಸ್ನ ವಿಪಿ ರಿಸರ್ಚ್ ಅನಲಿಸ್ಟ್ ಆಗಿರುವ ಜತಿನ್ ತ್ರಿವೇದಿ ಹೇಳಿದರು.