ಮುಂಬೈ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 4 ಪೈಸೆ ಕುಸಿದು 81.66 ಕ್ಕೆ ತಲುಪಿದೆ. ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಕಾರಣದಿಂದ ರೂಪಾಯಿ ಮೌಲ್ಯದಲ್ಲಿ ಹೆಚ್ಚಿನ ಏರಿಳಿತ ಉಂಟಾಗುತ್ತಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಡಾಲರ್ ವಿರುದ್ಧ 81.52 ರಲ್ಲಿ ಪ್ರಬಲವಾಗಿ ವಹಿವಾಟು ಆರಂಭಿಸಿತು. ನಂತರ ಲಾಭ ಕಳೆದುಕೊಂಡು 81.66 ಗೆ ಕುಸಿಯಿತು. ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಕುಸಿತ ದಾಖಲಿಸಿತು. ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಕರೆನ್ಸಿ ಎದುರು ರೂಪಾಯಿ 81.51 ಕ್ಕೆ ತಲುಪಿತ್ತು.
ಮಂಗಳವಾರ ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಏರಿಕೆಯಾಗಿದ್ದು ಯುಎಸ್ ಡಾಲರ್ ಎದುರು 81.62 ಕ್ಕೆ ಕೊನೆಗೊಂಡಿತ್ತು. ದಸರಾ ನಿಮಿತ್ತ ಬುಧವಾರ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು.
ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಪ್ರಕಾರ, ಕಳೆದ ಎರಡು ಸೆಷನ್‌ಗಳಲ್ಲಿ ಡಾಲರ್ ಕುಸಿತದ ಹಿನ್ನೆಲೆಯಲ್ಲಿ ರೂಪಾಯಿ ಬಲವಾಗಿತ್ತು. ಇದಲ್ಲದೆ, ಏಷ್ಯನ್ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಕರೆನ್ಸಿಗಳು ಸಹ ಈ ಗುರುವಾರ ಬೆಳಗ್ಗೆ ಪ್ರಬಲವಾಗಿವೆ.