ಇಂಫಾಲ: ಮಣಿಪುರ ಹಿಂಸಾಚಾರ ದೊಡ್ಡಮಟ್ಟದಲ್ಲಿ ವ್ಯಾಪಿಸಲು ವದಂತಿಗಳು ಮತ್ತು ನಕಲಿ ಸುದ್ದಿಗಳೇ ಹೆಚ್ಚು ಕಾರಣವಾಗಿವೆ ಎಂದು ಈಶಾನ್ಯ ರಾಜ್ಯದ ವಿವಿಧ ಭದ್ರತಾ ಏಜೆನ್ಸಿಗಳ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಚುರಾಚಂದ್‌ಪುರದಲ್ಲಿ ಬುಡಕಟ್ಟು ಜನಾಂಗದವರು ಓರ್ವ ಮಹಿಳೆಯನ್ನು ಹತ್ಯೆಗೈದಿದ್ದು, ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿರುವ ನಕಲಿ ಫೋಟೋ ಒಳಗೊಂಡ ಸುಳ್ಳು ಸುದ್ದಿ ಇಂಫಾಲದ ಕಣಿವೆಯಲ್ಲಿ ಬಿರುಗಾಳಿಯಂತೆ ಹಬ್ಬಿತ್ತು. ಇದರ ನಂತರದಲ್ಲಿ ಮೇ 4ರಂದು ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಯಿತು. ಈ ಮಹಿಳೆಯರ ಮೇಲೆ ನಡೆದ ಹೀನಾಯ ಕೃತ್ಯಕ್ಕೆ ನಕಲಿ ಫೋಟೋ, ಸುಳ್ಳು ಸುದ್ದಿಯೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆಯ ನಂತರ, ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಮೃತದೇಹವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊಲೆಯಾದ ಮಹಿಳೆಯದ್ದು ಎಂದು ಕಂಡುಬಂತು. ಆದರೆ ಅಷ್ಟೊತ್ತಿಗಾಗಲೇ ರೊಚ್ಚಿಗೆದ್ದಿದ್ದ ಕಾಂಗ್‌ಪೊಕ್ಪಿದಲ್ಲಿನ ಸಮುದಾಯದ ಜನರು ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿ, ಅತ್ಯಾಚಾರ ಮಾಡಿದ್ದರು. ಕೇವಲ ಒಂದು ಸುಳ್ಳು ಸುದ್ದಿಯಿಂದ ಹಿಂಸಾಚಾರ ಮತ್ತಷ್ಟು ಉಲ್ಬಣಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೆಡೆ, ಮಣಿಪುರದಲ್ಲಿನ ಸಂಘರ್ಷವನ್ನು ತಣ್ಣಗಾಗಿಸಲು ವಿವಿಧ ಭದ್ರತಾ ತಂಡಗಳು ಹರಸಾಹಸ ಪಡುತ್ತಿವೆ. ಆದರೆ ಮತ್ತೊಂದೆಡೆ, ನಕಲಿ ಸುದ್ದಿ ಮತ್ತು ಏಕಪಕ್ಷೀಯ ವಿಚಾರಗಳ ಪ್ರಸಾರ ನಿರಂತರವಾಗಿ ನಡೆಯುತ್ತಿದೆ. ನಾ ಮೊದಲು ತಾ ಮೊದಲು ಎಂಬಂತೆ ಪೈಪೋಟಿಗಿಳಿದು ಸುಳ್ಳು ಸುದ್ದಿಗಳ ಪ್ರಸಾರ ನಡೆಯುತ್ತಿದೆ. ಇವುಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ತಮ್ಮ ಹೇಳಿಕೆಗೆ ನಿದರ್ಶನವನ್ನೂ ಅವರು ನೀಡಿದ್ದಾರೆ.
ಸುಳ್ಳು ಸುದ್ದಿಗಳು- ನಿದರ್ಶನ 1 :ಮಣಿಪುರಚಾಂದಲ್ ಜಿಲ್ಲೆಯ ಕ್ವಾಥಾ ಗ್ರಾಮದಲ್ಲಿ ಬುಡಕಟ್ಟು ಜನರು ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತರಾಗಿ ಬಹುಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಪ್ರಮುಖ ದಿನಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ವರದಿಯಿಂದ ಎಚ್ಚೆತ್ತ ಮಣಿಪುರ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಇದೊಂದು ಸುಳ್ಳು ವರದಿ ಎಂದು ಗೊತ್ತಾಯಿತು.