ನವದೆಹಲಿ: ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಗಳಲ್ಲಿ ಅಗತ್ಯ ಇರುವ ಮೂಲ ದಾಖಲೆಗಳ ತ್ವರಿತ ಲಭ್ಯತೆಗಾಗಿ ಸಾಫ್ಟ್ ಕಾಪಿಗಳನ್ನು ಸೇರಿಸಲು ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ಪೀಠವು ಕ್ರಿಮಿನಲ್ ಮೇಲ್ಮನವಿಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿಯಮಗಳು - 2013ರ ಬಗ್ಗೆ ಉಲ್ಲೇಖಿಸಿದೆ. ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಒಳಗೊಂಡಿರುವ ಕ್ರಿಮಿನಲ್ ಮೇಲ್ಮನವಿಗಳಲ್ಲಿ ಮೂಲ ದಾಖಲೆಗಳನ್ನು ಭೌತಿಕ ಪ್ರತಿಗಳನ್ನಾಗಿ ಪ್ರಸ್ತುತ ಪಡಿಸಲು ನಿಯಮ 5ರ ಉಪ ನಿಯಮಗಳು 2 ಮತ್ತು 3ರ ಪರಾಮರ್ಶೆ ಅಗತ್ಯವಾಗಿದೆ. 'ಮೂಲ ದಾಖಲೆಗಳು' ಎಂಬ ಪದಗಳಿಗೆ ಮೊದಲು 'ಸಾಫ್ಟ್ ಕಾಪಿ' ಪದಗಳನ್ನು ಸೇರಿಸಲು ಉಪ - ನಿಯಮ 3 ಅನ್ನು ತಿದ್ದುಪಡಿ ಮಾಡಬೇಕು. ಇದರ ಪರಿಣಾಮವಾಗಿ ಮೂಲ ದಾಖಲೆಗಳ ಇ - ಪ್ರತಿಗಳನ್ನು ಸ್ವೀಕರಿಸಲಾಗುತ್ತದೆ. ಇದು ನ್ಯಾಯಾಲಯಕ್ಕೆ ಅಂತಹ ದಾಖಲೆಗಳ ತ್ವರಿತ ಲಭ್ಯತೆ ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ವಿಧಾನಗಳನ್ನು ಸುಗಮಗೊಳಿಸುತ್ತದೆ ಎಂದು ಪೀಠವು ನವೆಂಬರ್ 9 ರಂದು ನೀಡಿದ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಈ ನಿಯಮಗಳಿಗೆ ಅಗತ್ಯವಾದ ತಿದ್ದುಪಡಿ ಖುಲಾಸೆ ಅಥವಾ ಶಿಕ್ಷೆಯ ಆದೇಶದ ವಿರುದ್ಧ ಪ್ರಕರಣಗಳಿಗೆ ವಿಸ್ತರಿಸಲಾಗುವುದು. ದಾಖಲೆಗಳ ಅಂತಹ ಸಾಫ್ಟ್ ಕಾಪಿಯನ್ನು ಒಮ್ಮೆ ಸ್ವೀಕರಿಸಿದ ನಂತರ, ಕಕ್ಷಿದಾರರ ಪರವಾಗಿ ಹಾಜರಾಗುವ ವಕೀಲರಿಗೆ ಒದಗಿಸಲಾಗುತ್ತದೆ. ಈ ತೀರ್ಪಿನ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿ ಅವರ ದಯೆಯ ಪರಿಗಣನೆ ಮತ್ತು ಸೂಕ್ತ ನಿರ್ದೇಶನಗಳಿಗಾಗಿ ಅವರು ಸೂಕ್ತ ಎಂದು ಭಾವಿಸಿದರೆ, ಅವರ ಮುಂದೆ ಇದನ್ನು ಇರಿಸಲು ರಿಜಿಸ್ಟ್ರಿಗೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿದೆ.