ಗಾಂಧಿನಗರ (ಗುಜರಾತ್):ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಥಾಯ್ಲೆಂಡ್ನಿಂದ ಬರುವ ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಆರ್ಟಿಪಿಸಿಆರ್ ವರದಿಯನುಸಾರ ಪಾಸಿಟಿವ್ ಬಂದರೆ ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸೂಚಿತ ವಿದೇಶಗಳಿಗೆ ಹೋಗುವ ಮತ್ತು ಬರುವ ಜನರು ಪ್ರಯಾಣಕ್ಕೂ ಮೊದಲು ಏರ್ ಸುವಿಧಾ ಫಾರ್ಮ್ ಅನ್ನು ಭರ್ತಿ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ತಡೆ ಸಲುವಾಗಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶನಿವಾರ ಹೇಳಿದರು.
ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಥಾಯ್ಲೆಂಡ್ನಲ್ಲಿ ಕೊರೊನಾ ವಿಪರೀತವಾಗಿದೆ. ಆ ದೇಶಗಳಿಂದ ಇಲ್ಲಿಗೆ ಬರುವ ಎಲ್ಲ ಪ್ರಯಾಣಿಕರು ಕೊರೊನಾಗೆ ಪರೀಕ್ಷೆಗೆ ಒಳಗಾಗಬೇಕು. ವರದಿಯಲ್ಲಿ ಪಾಸಿಟಿವ್ ಬಂದರೆ ಅಂಥವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಪಾಸಿಟಿವ್ ಬಂದ ಪ್ರಯಾಣಿಕರ ಮೇಲೆ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ವಿಮಾನ ನಿಲ್ದಾಣಗಳಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಆಮ್ಲಜನಕ ಸಿದ್ಧತೆಗೆ ಸೂಚನೆ:ದೇಶದಲ್ಲಿ ಕೊರೊನಾ ಭೀತಿ ಸೃಷ್ಟಿಯಾಗುತ್ತಿರುವ ಕಾರಣ ಅಗತ್ಯ ವೈದ್ಯಕೀಯ ಸಿದ್ಧತೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋವಿಡ್ ನಿರ್ವಹಣೆಗಾಗಿ ಆಮ್ಲಜನಕದ ದಾಸ್ತಾನು ಮತ್ತು ಪೂರೈಕೆಯನ್ನು ಪರಿಶೀಲಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಕೇಸ್ ಕಡಿಮೆಯಿದ್ದರೂ ವೈದ್ಯಕೀಯ ಮೂಲಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳಿ. ಪಿಎಸ್‌ಎ ಸ್ಥಾವರಗಳ ಕಾರ್ಯನಿರ್ವಹಣೆ, ಅವುಗಳ ಪರಿಶೀಲನೆ ನಡೆಸಿ. ಆಮ್ಲಜನಕದ ನಿರಂತರ ಪೂರೈಕೆ ಮತ್ತು ಅದರ ಮರುಪೂರಣವನ್ನು ಖಚಿತಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದೆ.
ಓದಿ:ಕೋವಿಡ್ ವಿಚಾರದಲ್ಲಿ ಪ್ರಧಾನಮಂತ್ರಿ ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ