ಪುಣೆ (ಮಹಾರಾಷ್ಟ್ರ) : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅಖಿಲ ಭಾರತ ಸಮನ್ವಯ ಸಭೆ ಗುರುವಾರದಿಂದ ಪುಣೆಯಲ್ಲಿ ನಡೆಯಲಿದೆ. ಮೂರು ದಿನಗಳ ಸಭೆಯಲ್ಲಿ ರಾಷ್ಟ್ರೀಯ ಭದ್ರತೆ, ಸಾಮಾಜಿಕ ಆರ್ಥಿಕ ಸನ್ನಿವೇಶಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಿಜೆಪಿಯ ಪ್ರಮುಖ ಮುಖಂಡ ಅರುಣ್ ಕುಮಾರ್ ಸೇರಿದಂತೆ ಐದು ಜಂಟಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಪ್ರಮುಖ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರ ಸೇವಿಕಾ ಸಮಿತಿ, ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ್ ಆಶ್ರಮ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಕಿಸಾನ್ ಸಂಘ, ವಿದ್ಯಾ ಭಾರತಿ, ಭಾರತೀಯ ಮಜ್ದೂರ್ ಸಂಘ, ಸಂಸ್ಕಾರ ಭಾರತಿ, ಸೇವಾ ಭಾರತಿ ಮತ್ತು ಸಂಸ್ಕೃತ ಭಾರತಿ ಸೇರಿದಂತೆ ಇತರ 35 ಆರ್ಎಸ್ಎಸ್ ಪ್ರೇರಿತ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆ ಸೆಪ್ಟೆಂಬರ್ 16 ರಂದು ಮುಕ್ತಾಯಗೊಳ್ಳಲಿದೆ. ಕಳೆದ ವರ್ಷದ ಬೈಠಕ್ ಛತ್ತೀಸ್‌ಗಢದಲ್ಲಿ ನಡೆದಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಭೆಯಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರಸ್ನೇಹಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯಗಳ ನಿರ್ವಹಣೆಯಂತಹ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಈ ಸಭೆಯಲ್ಲಿ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ನಿರ್ಧರಿಸಲಾಗುವುದು. ದೇಶದ ಪ್ರಸ್ತುತ ಸಾಮಾಜಿಕ-ಆರ್ಥಿಕ ಸನ್ನಿವೇಶವೂ ಚರ್ಚೆಗೆ ಬರಲಿದೆ. ವಿವಿಧ ಸಂಘಟನೆಗಳ ಪ್ರತಿನಿಧಿಗಳು ರಾಷ್ಟ್ರೀಯ ಪರಿಸ್ಥಿತಿ ಮತ್ತು ಪ್ರಸ್ತುತ ಸನ್ನಿವೇಶದ ಹಿನ್ನೆಲೆಯಲ್ಲಿ ಸಭೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಆರ್ಎಸ್ಎಸ್ಗೆ ಸಂಯೋಜಿತವಾಗಿರುವ 36 ಸಂಘಟನೆಗಳು ಈ ವಾರ್ಷಿಕ ಬೈಠಕ್ನಲ್ಲಿ ಭಾಗವಹಿಸಲಿವೆ.
ಪುಣೆಯ ಎಸ್.ಪಿ.ಕಾಲೇಜು ಕ್ಯಾಂಪಸ್ ನಲ್ಲಿ ಸಭೆ ನಡೆಯಲಿದೆ. ಹೀಗಾಗಿ ಶಿಕ್ಷಣ ಪ್ರಸಾರಕ ಮಂಡಳಿ (ಎಸ್ ಪಿಎಂ) ನಡೆಸುತ್ತಿರುವ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ರಜೆ ನೀಡಲಾಗಿದೆ. ಸಭೆ ಬೆಳಗ್ಗೆ 9 ರಿಂದ ರಾತ್ರಿ 8:30 ರವರೆಗೆ ನಡೆಯಲಿದ್ದು, ಕೆಲವು ತರಗತಿಯ ಕೊಠಡಿಗಳನ್ನು ಸಭೆಗೆ ಬಳಸಲಾಗುವುದು. ಕ್ಯಾಂಪಸ್ನಲ್ಲಿ ಇತರ ಸಂಸ್ಥೆಗಳು ಸಹ ಇದ್ದು, ಎಸ್ ಪಿಎಂ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ಆದರೆ ಕಾಲೇಜು ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಎಸ್ಪಿಎಂ ಸಂಸ್ಥೆ ಹೇಳಿದೆ.
ಇದನ್ನೂ ಓದಿ :ಟಿಮ್ ಕುಕ್ ಭೇಟಿಯಾದ ಪಿವಿ ಸಿಂಧು; ಬ್ಯಾಡ್ಮಿಂಟನ್ ಆಡುವ ಆಫರ್ ನೀಡಿದ ಆಟಗಾರ್ತಿ