ನವದೆಹಲಿ:''ಇಸ್ಲಾಮಿಕ್ ಆಕ್ರಮಣದಿಂದಾಗಿ ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ, ಸತಿ ಪದ್ಧತಿ, ವಿಧವೆಯ ಮರು ವಿವಾಹದ ನಿಷೇಧದಂತಹ ಸಾಮಾಜಿಕ ಅನಿಷ್ಟಗಳು ಬೆಳೆದಿದ್ದರಿಂದ ಮಹಿಳೆಯರು ಅಪಾಯಕ್ಕೆ ಸಿಲುಕಿದ್ದರು. ಮಧ್ಯಕಾಲೀನ ಅವಧಿಯಲ್ಲಿ ಆಕ್ರಮಣಕಾರರಿಂದ ರಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹಾಕಲಾಗಿತ್ತು'' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಪದಾಧಿಕಾರಿ ಕೃಷ್ಣ ಗೋಪಾಲ್ ಹೇಳಿದ್ದಾರೆ.
ಮಧ್ಯಕಾಲೀನ ಅವಧಿ ದೊಡ್ಡ ಅವಮಾನದ ಯುಗ:ದೆಹಲಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ನಾರಿ ಶಕ್ತಿ ಸಂಗಮ” ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಮಧ್ಯಕಾಲೀನ ಅವಧಿಯು ಬಹಳ "ಕಷ್ಟಕರ" ಸಮಯ. ಇಡೀ ದೇಶವು ಅಧೀನತೆಯೊಂದಿಗೆ ಹೋರಾಡುತ್ತು. ದೇವಾಲಯಗಳನ್ನು ಕೆಡವಲಾಗಿತ್ತು. ದೊಡ್ಡ ವಿಶ್ವವಿದ್ಯಾಲಯಗಳನ್ನು ನಾಶಪಡಿಸಲಾಗಿತ್ತು. ಮತ್ತು ಮಹಿಳೆಯರು ಅಪಾಯಕ್ಕೆ ಒಳಗಾಗಿದ್ದರು. ಇಲ್ಲಿಂದ ಲಕ್ಷಗಟ್ಟಲೆ ಮಹಿಳೆಯರನ್ನು ಅಪಹರಿಸಿ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗಿತ್ತು. ಅಹ್ಮದ್ ಷಾ, ಮೊಹಮ್ಮದ್ (ಘೋರಿ), ಘಜ್ನಿ ಮಹಮ್ಮೊದ್ ಅವರೆಲ್ಲರೂ ಇಲ್ಲಿಂದ ಮಹಿಳೆಯರನ್ನು ಕರೆದೊಯ್ದು ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದ್ದರು. ಅದೊಂದು ದೊಡ್ಡ ಅವಮಾನದ ಯುಗ'' ಎಂದು ಗೋಪಾಲ್ ತಿಳಿಸಿದ್ದಾರೆ.
''ಮಹಿಳೆಯರು ಮತ್ತು ಹುಡುಗಿಯರನ್ನು ರಕ್ಷಿಸಲು, ಅವರ ಮೇಲೆ ನಮ್ಮ ಸಮಾಜ ಹಲವಾರು ನಿರ್ಬಂಧಗಳನ್ನು ವಿಧಿಸಿತು. ಇದರ ಪರಿಣಾಮವಾಗಿ, ಅವರು ಶಾಲೆಗಳಿಗೆ, ಗುರುಕುಲಗಳಿಗೆ ಹೋಗುವುದನ್ನು ನಿಲ್ಲಿಸಿದರು. ಅವಿದ್ಯಾವಂತರಾದರು" ಎಂದ ಅವರು, ''ಆಕ್ರಮಣಕಾರರಿಂದ ರಕ್ಷಿಸಲು ಜನರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗುತ್ತಿದ್ದರಿಂದ ಬಾಲ್ಯ ವಿವಾಹದ ಅಭ್ಯಾಸವು ಪ್ರಾರಂಭವಾಯಿತು'' ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ.
"ನಮ್ಮ ದೇಶದಲ್ಲಿ ಸತಿ ಪದ್ಧತಿ ಇರಲಿಲ್ಲ. ಆದರೆ, ಜೌಹರ್ (ಸ್ವಯಂ ದಹನ) ನಡೆಯಲಾರಂಭಿಸಿತು, ಮಹಿಳೆಯರು ಸತಿಯಾಗಲು ಪ್ರಾರಂಭಿಸಿದರು. ವಿಧವೆಯರ ಮರುವಿವಾಹದ ಮೇಲೆ ನಿರ್ಬಂಧಗಳನ್ನು ಹೇರಲಾಯಿತು. ಯುದ್ಧಗಳಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರು ಕೊಲ್ಲಲ್ಪಟ್ಟರು. ಇಸ್ಲಾಮಿಕ್ ಆಕ್ರಮಣದ ಮೊದಲು, ಮಹಿಳೆಯರು "ಶಾಸ್ತ್ರ" (ವಿದ್ವಾಂಸ ಚರ್ಚೆಗಳು) ನಲ್ಲಿ ಭಾಗವಹಿಸುತ್ತಿದ್ದರು ಮತ್ತು ವೇದಗಳಿಗೆ ಪದ್ಯಗಳನ್ನು ಸಹ ನೀಡುತ್ತಿದ್ದರು'' ಎಂದು ಗೋಪಾಲ್ ತಿಳಿಸಿದ್ದಾರೆ.