ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂಲಭೂತವಾದಿ ಮತ್ತು ಫ್ಯಾಸಿಸ್ಟ್ ಸಂಘಟನೆಯಾಗಿದೆ ಮತ್ತು ಅದು ಭಾರತದ ಬಹುತೇಕ ಸಂಸ್ಥೆಗಳನ್ನು ಆವರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ನಲ್ಲಿ ಆರೋಪಿಸಿದ್ದಾರೆ. ಲಂಡನ್ನ ಚಥಮ್ ಹೌಸ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸ್ವರೂಪ ಸಂಪೂರ್ಣವಾಗಿ ಬದಲಾಗಿದೆ ಮತ್ತು ಆರ್‌ಎಸ್‌ಎಸ್ ಎಂಬ ಒಂದು ಮೂಲಭೂತವಾದಿ, ಫ್ಯಾಸಿಸ್ಟ್ ಸಂಘಟನೆಯು ಮೂಲತಃ ಭಾರತದ ಎಲ್ಲ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಮಾತನಾಡಿದರು. ಭಾರತದಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು. ಇದನ್ನು ಕಾಂಗ್ರೆಸ್ ಹೇಳುತ್ತಿಲ್ಲ, ಭಾರತೀಯ ಪ್ರಜಾಪ್ರಭುತ್ವದಲ್ಲಿ ಗಂಭೀರ ಸಮಸ್ಯೆ ಇದೆ ಎಂದು ವಿದೇಶಿ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳು ಬರುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದರು. ದೇಶದ ವಿವಿಧ ಸಂಸ್ಥೆಗಳು ಹೇಗೆ ಬೆದರಿಕೆ ಎದುರಿಸುತ್ತಿವೆ ಎಂಬುದನ್ನು ಕಾಂಗ್ರೆಸ್ ನಾಯಕ ಉಲ್ಲೇಖಿಸಿದ್ದಾರೆ.
ನಮ್ಮ ದೇಶದ ವಿವಿಧ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವಲ್ಲಿ ಅವರು ಎಷ್ಟು ಯಶಸ್ವಿಯಾಗಿದ್ದಾರೆ ಎಂಬುದು ನನಗೆ ಆಘಾತವನ್ನುಂಟು ಮಾಡಿದೆ. ಪತ್ರಿಕಾ ರಂಗ, ನ್ಯಾಯಾಂಗ, ಸಂಸತ್ತು ಮತ್ತು ಚುನಾವಣಾ ಆಯೋಗಗಳು ಬೆದರಿಕೆ ಎದುರಿಸುತ್ತಿವೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ನಿಯಂತ್ರಿಸಲ್ಪಡುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದರು. ತನಿಖಾ ಸಂಸ್ಥೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ನೀವು ಯಾವುದೇ ವಿರೋಧ ಪಕ್ಷದ ನಾಯಕನನ್ನು ಕೇಳಿ ತಿಳಿಯಬಹುದು. ನನ್ನ ಫೋನ್‌ನಲ್ಲಿ ಪೆಗಾಸಸ್ ಇತ್ತು. ನಾವು ಅಧಿಕಾರದಲ್ಲಿದ್ದಾಗ ಇಂಥದ್ದೆಲ್ಲ ಆಗಿರಲಿಲ್ಲ ಎಂದು ಅವರು ಹೇಳಿದರು.