ನವದೆಹಲಿ:ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಹಿಂದೂಗಳು ಅಥವಾ ಮುಸ್ಲಿಮರ ಪ್ರಾಬಲ್ಯ ಸಾಧ್ಯವಿಲ್ಲ. ಇಲ್ಲಿ ಪ್ರಾಬಲ್ಯವೇನಿದ್ದರೂ ಅದು ಭಾರತೀಯರದ್ದಷ್ಟೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಬಾಗವತ್ ಹೇಳಿದರು. ಗಾಜಿಯಾಬಾದ್‌ನಲ್ಲಿ ಡಾ.ಖವಾಜಾ ಇಫ್ತಿಖರ್ ಅಹ್ಮದ್ ಅವರು ಬರೆದ 'ದಿ ಮೀಟಿಂಗ್ಸ್ ಆಫ್ ಮೈಂಡ್ಸ್: ಎ ಬ್ರಿಡ್ಜಿಂಗ್ ಇನಿಶಿಯೇಟಿವ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಕತೆ ಇಲ್ಲದೆ ದೇಶದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ರಾಷ್ಟ್ರೀಯತೆ ದೇಶದ ಜನರಲ್ಲಿ ಏಕತೆಗೆ ಆಧಾರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಯಾವುದೇ ಮುಸ್ಲಿಂ ಧರ್ಮೀಯ ಇಲ್ಲಿ ವಾಸಿಸಬಾರದು ಎಂದು ಹಿಂದೂ ಧರ್ಮೀಯನೊಬ್ಬ ಹೇಳಿದರೆ, ಆ ವ್ಯಕ್ತಿ ನಿಜವಾಗಿಯೂ ಹಿಂದೂ ಅಲ್ಲ. ಗೋವು ಪವಿತ್ರ ಪ್ರಾಣಿ ನಿಜ. ಆದ್ರೆ ಅದರ ಹೆಸರಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ಪಾಲ್ಗೊಳ್ಳುವವರು ಹಿಂದುತ್ವದ ವಿರೋಧಿಗಳೇ ಆಗಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ನಾವು ಕಳೆದ 40,000 ವರ್ಷಗಳಿಂದ ಒಂದೇ ಪೂರ್ವಜರ ವಂಶಸ್ಥರು ಎಂಬುದು ಸಾಬೀತಾಗಿದೆ. ಭಾರತದ ಜನರು ಒಂದೇ ಡಿಎನ್‌ಎ ಹೊಂದಿದ್ದಾರೆ. ರಾಜಕೀಯವು ಜನರನ್ನು ಒಂದುಗೂಡಿಸಲು ಸಾಧ್ಯವಿಲ್ಲ. ಆದರೆ ಅದು ಏಕತೆಯನ್ನು ವಿರೂಪಗೊಳಿಸುವ ಅಸ್ತ್ರವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರು ಅಪಾಯದಲ್ಲಿಲ್ಲ. ದೇಶದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಭಯದ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಇದೇ ವೇಳೆ ಅವರು ಮನವಿ ಮಾಡಿದರು.