ನಾಗ್ಪುರ್ (ಮಹಾರಾಷ್ಟ್ರ) : ಪುರಾಣ ಕಾಲದ ಹನುಮಂತ ಮತ್ತು 17ನೇ ಶತಮಾನದ ಐತಿಹಾಸಿಕ ಯುಗದ ಮರಾಠ ದೊರೆ ಛತ್ರಪತಿ ಶಿವಾಜಿ ನಮ್ಮ ಸ್ವಯಂ ಸೇವಕರಿಗೆ ಮಾದರಿಯಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ್ ಬಲಿರಾಮ್ ಹೆಗ್ಡೆವಾರ್ ಮತ್ತು ಎಂ.ಎಸ್.ಗೋಲ್ವಾಕರ್ ಹಾಗೂ ಬಾಲಸಾಹೇಬ್ ದೆರೊಸ್ (ಆರ್ಎಸ್ಎಸ್ನ ಮೂರು ಮುಖ್ಯಸ್ಥರು) ಅವರು ಕೇಸರಿ ಧ್ವಜ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂದಿದ್ದರು. ಕೇಸರಿ ಧ್ವಜ ನಮ್ಮ ತತ್ವಗಳ ಸಂಕೇತ. ನಮ್ಮ ಚಿಂತನೆಗಳು ತತ್ವರೂಪದಲ್ಲಿದ್ದು, ಕೇಸರಿ ಧ್ವಜವೂ ಆ ತತ್ವವೇ ಆಗಿದೆ ಎಂದು ಪ್ರತಿಪಾದಿಸಿದರು.
ಹನುಮಂತ-ಶಿವಾಜಿ ಆದರ್ಶವಾಗಲಿ: ಆರ್ಎಸ್ಎಸ್ನ ಮೂವರು ಮುಖ್ಯಸ್ಥರು, ಪುರಾಣ ಕಾಲದ ರಾಮಭಕ್ತ ಹನುಮಂತ ಮತ್ತು ಇತಿಹಾಸಕಾಲದ ರಾಜ ಛತ್ರಪತಿ ಶಿವಾಜಿ ಮಹಾರಾಜರನ್ನು ಅನುಸರಿಸಬೇಕೆಂದು ಸ್ವಯಂ ಸೇವಕರಿಗೆ ಕರೆಕೊಟ್ಟರು. ಮುಂದುವರೆದು ಮಾತನಾಡಿದ ಅವರು, ಸ್ವಯಂ ಸೇವಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಂಘ, ಶಾಖೆಗೆ ಬರುವುದಿಲ್ಲ. ಅವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಈ ಮೊದಲು ಬಾಲ್ಯದಲ್ಲೇ ಸ್ವಯಂ ಸೇವಕರು ಶಾಖೆಯ ಕಾರ್ಯಕ್ರಮಗಳಿಂದ ಆಕರ್ಷಿತರಾಗುತ್ತಿದ್ದರು. ವಯೋಮಾನಕ್ಕೆ ಬಂದಾಗ ಅವರಿಗೆ ತಾವು ಶಾಖೆಗೆ ಬಂದಿರುವುದು ದೇಶ ಸೇವೆಗಾಗಿ ಎಂಬುದು ಅರಿವಾಗುತ್ತದೆ ಎಂದರು.
ಭಾರತ ವಿಶ್ವಗುರುವಾಗಬೇಕು:ದೇಶಕ್ಕಾಗಿ ಸೇವೆ ಸಲ್ಲಿಸುವ ಚಿಂತನೆಯು ಸ್ವಯಂಸೇವಕರನ್ನು ಅತ್ಯಂತ ಸಮರ್ಥ ಮನುಷ್ಯರನ್ನಾಗಿ ಮಾಡುತ್ತದೆ. ಇದರಿಂದ ಅವರು ಜೀವನದಲ್ಲಿ ಉನ್ನತ ಗುರಿ ಹೊಂದುತ್ತಾರೆ. ಇದೇ ವೇಳೆ, ಹನುಮಂತನ ಮೌಲ್ಯ ಮತ್ತು ಸಾಮರ್ಥ್ಯವನ್ನು ಅಳವಡಿಸಿಕೊಳ್ಳುವಂತೆಯೂ ಆರ್‌ಎಸ್‌ಎಸ್ ಸ್ವಯಂ ಸೇವಕರಿಗೆ ಕರೆ ನೀಡಿದರು. ಭಾರತವನ್ನು ವಿಶ್ವ ಗುರು ಮಾಡುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ನಾವು ದೊಡ್ಡ ಕಾರಣಕ್ಕಾಗಿ ಕೆಲಸ ಮಾಡಿದರೆ, ಬರುವ ಮುಂದಿನ ಪೀಳಿಗೆಯ ಜನರು ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.