ನಾಗ್ಪುರ (ಮಹಾರಾಷ್ಟ್ರ):ಎಲ್ಲ ಧರ್ಮಕ್ಕೂ ಅನ್ವಯಿಸುವ ಜನಸಂಖ್ಯಾ ನಿಯಂತ್ರಣ ನೀತಿ ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದಿನ ವರ್ಣ, ಜಾತಿ ವ್ಯವಸ್ಥೆಯನ್ನು ಸಮಾಜ ಮರೆಯಬೇಕು. ಅಲ್ಪಸಂಖ್ಯಾತರಿಗೆ ತೊಂದರೆ ಉಂಟು ಮಾಡುವುದು ಸಂಘ, ಹಿಂದು ಸಮಾಜದ ಸ್ವಭಾವವಲ್ಲ ಎಂದು ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್ ಅವರು, ಸಮಾಜದ ಹಿತದೃಷ್ಟಿಯಿಂದ ಯೋಚಿಸುವ ಪ್ರತಿಯೊಬ್ಬರೂ ಬಹಳ ಹಳೆಯ ಪದ್ಧತಿಯಾದ 'ವರ್ಣ' ಮತ್ತು 'ಜಾತಿ' ವ್ಯವಸ್ಥೆಯನ್ನು ಈಗಲೂ ಆಚರಿಸುವುದನ್ನು ಬಿಡಬೇಕು. ಅದೊಂದು ಹಳೆಯ ವಿಚಾರವಾಗಿದೆ ಎಂದರು.
ಅಲ್ಪಸಂಖ್ಯಾತರನ್ನು ಅಪಾಯಕ್ಕೆ ಸಿಲುಕಿಸುವುದು ಸಂಘ ಅಥವಾ ಹಿಂದೂಗಳ ಸ್ವಭಾವವಲ್ಲ. ಆರ್‌ಎಸ್‌ಎಸ್ ಸಹೋದರತ್ವದ ಪರವಾಗಿ ನಿಲ್ಲಲು ನಿರ್ಧರಿಸುತ್ತದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆರೆಸ್ಸೆಸ್ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸುತ್ತಿವೆ. ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಜನರಲ್ಲಿ ಪರಸ್ಪರ ವಿಷಬೀಜ ಬಿತ್ತುತ್ತಿವೆ ಎಂದು ಆರೋಪಿಸಿದರು.
ಹಿಂದು ಸಮಾಜ ಈಗಿನ ಅಗತ್ಯ:ಹಿಂದುಗಳಿಂದ ಸಮಾಜಕ್ಕೆ ಯಾವುದೇ ಬೆದರಿಕೆ ಇಲ್ಲ. ನಾವು ಭ್ರಾತೃತ್ವವನ್ನು ಬಯಸುತ್ತೇವೆ. ದ್ವೇಷ ಹರಡುವ, ಅನ್ಯಾಯ, ದೌರ್ಜನ್ಯ, ಗೂಂಡಾಗಿರಿ, ದ್ವೇಷದ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಆತ್ಮರಕ್ಷಣೆಗಾಗಿ ಹೋರಾಡಬೇಕಿದೆ. ಯಾವುದೇ ಬೆದರಿಕೆಗೆ ಹಿಂದು ಸಮಾಜ ಬಗ್ಗುವುದಿಲ್ಲ. ಹಿಂದು ಸಮಾಜ ಇಂದಿನ ಕಾಲದ ಅಗತ್ಯವಾಗಿದೆ. ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲಲು ಸಂಘ ಸಂಕಲ್ಪ ಮಾಡುತ್ತದೆ ಎಂದು ಮೋಹನ್ ಭಾಗವತ್ ಅವರು ಹೇಳಿದರು.
ಓದಿ:ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವೂ ಲಾಗ ಹೊಡಿಯುತ್ತೀರಿ: ಯತ್ನಾಳ್