ನಾಗಪುರ(ಮಹಾರಾಷ್ಟ್ರ):ತಾಲಿಬಾನ್ ವಿಚಾರವಾಗಿ ಭಾರತ ಯಾವಾಗಲೂ ಎಚ್ಚರಿಕೆಯಿಂದಿರಬೇಕು. ತಾಲಿಬಾನಿಗಳಿಗೆ ಸಹಕಾರ ನೀಡುತ್ತಿರುವ ರಷ್ಯಾ, ಟರ್ಕಿ, ಚೀನಾ ಮತ್ತು ಪಾಕಿಸ್ತಾನದ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.
ದಸರಾ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ಆರ್ಎಸ್ಎಸ್ ಮುಖ್ಯಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲಾ ರೀತಿಯ ಮಾತುಕತೆಗಳಿಗೆ ಭಾರತ ಸಿದ್ಧವಾಗಿರಬೇಕು. ಅದರಂತೆ ಎಲ್ಲಾ ಸಾಧ್ಯತೆಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ ಎಂದರು.
ತಾಲಿಬಾನ್ ಬದಲಾಗಿರಬಹುದು, ಆದರೆ ಪಾಕಿಸ್ತಾನ ಬದಲಾಗಿದೆಯೇ? ಚೀನಾ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆಯೇ? ಎಂದು ಪ್ರಶ್ನಿಸಿದ ಅವರು ನಾವು ಇನ್ನೂ ಸಿದ್ಧರಾಗಿರಬೇಕು ಎಂದು ಭಾಷಣದಲ್ಲಿ ತಿಳಿಸಿದ್ದಾರೆ.
ಹಿಂದೂಗಳಿಗೆ ದೇವಾಲಯಗಳನ್ನು ಹಸ್ತಾಂತರಿಸಿ:ಹಿಂದೂ ದೇವಾಲಯಗಳ ನಿರ್ವಹಣಾ ಹಕ್ಕುಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕೆಂದು ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಭಾಗವತ್ ಮನವಿ ಮಾಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿರುವ ದೇವಾಲಯಗಳು ಬಹುತೇಕ ರಾಜ್ಯ ಸರ್ಕಾರಗಳಿಂದ ನಿರ್ವಹಿಸುತ್ತವೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ದೇಶದ ಉಳಿದ ಭಾಗಗಳಲ್ಲಿ ಕೆಲವೊಂದು ದೇವಾಲಯಗಳು ಟ್ರಸ್ಟ್ಗಳ ಮೂಲಕ ನಡೆಯುತ್ತಿವೆ. ಇನ್ನೂ ಕೆಲವು ದೇವಾಲಯಗಳು ಯಾವುದೇ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಎಲ್ಲಾ ದೇವಾಲಯಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರ ಮಾಡಬೇಕು. ಜೊತೆಗೆ ಹಿಂದೂ ದೇವಾಲಯಗಳಲ್ಲಿನ ಸಂಪತ್ತನ್ನು ಕೇವಲ ಹಿಂದೂಗಳಿಗೆ ಮಾತ್ರ ಬಳಸಬೇಕು ಎಂದು ಮೋಹನ್ ಭಾಗವತ್ ಒತ್ತಾಯಿಸಿದ್ದಾರೆ.
ಜನಸಂಖ್ಯಾ ಅಸಮತೋಲನ ಬಗ್ಗೆ: ದೇಶದಲ್ಲಿ ಜನಸಂಖ್ಯೆಯಲ್ಲಿ ಆಗುತ್ತಿರುವ ತ್ವರಿತ ಬೆಳವಣಿಗೆ ಮುಂದಿನ ದಿನಗಳಲ್ಲಿ ಸವಾಲಾಗುವ ಸಾಧ್ಯತೆ ಇದೆ.ದೇಶದ ಅಭಿವೃದ್ಧಿಯ ವಿಚಾರವಾಗಿ ಯೋಚಿಸುವುದಾದರೆ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಪುನರ್ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದು ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ.
ಪ್ರಸ್ತುತವಾಗಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಹಿಂದೂಗಳು ತಮ್ಮ ಪ್ರದೇಶಗಳಿಂದ ಬೇರೆಡೆಗೆ ತೆರಳುವಂತೆ ಮಾಡಲು ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಆದ್ದರಿಂದ ಎಲ್ಲರಿಗೂ ಅನ್ವಯವಾಗುವಂತಹ ಒಂದೇ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಭಾಗವತ್ ಸೂಚನೆ ಕೊಟ್ಟರು.
ಓಟಿಟಿಗಳ ಮೇಲೆ ನಿಯಂತ್ರಣ ಅಗತ್ಯ:ಇತ್ತೀಚೆಗೆ ಡಿಜಿಟಲೀಕರಣ ವೇಗವಾಗಿ ನಡೆಯುತ್ತಿದ್ದು, ಎಲ್ಲಾ ಮಕ್ಕಳೂ ಆನ್ಲೈನ್ ಶಿಕ್ಷಣ ಪಡೆಯುವಂಥ ಸ್ಥಿತಿ ಕೊರೊನಾ ವೇಳೆಯಲ್ಲಿ ನಿರ್ಮಾಣವಾಗಿತ್ತು. ಈಗ ಎಲ್ಲರ ಬಳಿಯೂ ಮೊಬೈಲ್ ಇದೆ. ಓಟಿಟಿ ಫ್ಲಾಟ್ಫಾರ್ಮ್ಗಳ ಮೇಲೆ ನಿಯಂತ್ರಣ ಇಲ್ಲದಿರುವುದು ದೇಶದಲ್ಲಿ ಅರಾಜಕತೆಯ ಸೃಷ್ಟಿಗೆ ಕಾರಣವಾಗುತ್ತದೆ. ಆದ್ದರಿಂದ ಓಟಿಟಿ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾಗವತ್ ಹೇಳಿದ್ದಾರೆ.
ಮಾದಕ ವಸ್ತುಗಳ ಹಣ ದೇಶ ವಿರೋಧಿ ಚಟುವಟಿಕೆಗೆ:ದೇಶದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಸಾಗಾಣೆ ಜಾಲಗಳು ಪತ್ತೆಯಾಗುತ್ತಿದ್ದು, ಅವುಗಳಿಂದ ಬಂದ ಹಣವನ್ನು ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಯುವಜನತೆ ಈ ಬಗ್ಗೆ ಜಾಗೃತರಾಗಬೇಕು. ಮಾದಕ ವಸ್ತು ಸೇವನೆಯಿಂದ ದೂರ ಉಳಿಯಬೇಕು. ಸ್ವಯಂ ನಿಯಂತ್ರಣವೇ, ಉತ್ತಮ ನಿಯಂತ್ರಣವಾಗಿದ್ದು, ಸರ್ಕಾರವೂ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಭಾಗವತ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಭಾರತದ 'ಮಿಸೈಲ್ ಮ್ಯಾನ್' ಅಬ್ದುಲ್ ಕಲಾಂ ಜನ್ಮದಿನ: ರಾಷ್ಟ್ರಪತಿ, ಪ್ರಧಾನಿ ಸ್ಮರಣೆ