ನಾಗಪುರ(ಮಹಾರಾಷ್ಟ್ರ): ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನ ಅಲ್ಲಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹಂಚಿಕೆಯಾಗುತ್ತಿದ್ದ ಶೇಕಡಾ 80ರಷ್ಟು ಹಣ ಅಲ್ಲಿನ ರಾಜಕೀಯ ನಾಯಕರ ಜೇಬು ಸೇರುತ್ತಿತ್ತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಶ್ಮೀರಕ್ಕಾಗಿ ಹಂಚಿಕೆಯಾದ ಹಣ ಜನರಿಗೆ ತಲುಪಲೇ ಇಲ್ಲ. ಅದು ಅಲ್ಲಿನ ನಾಯಕರ ಜೇಬು ಸೇರುತ್ತಿತ್ತು. ಸಂವಿಧಾನದ ವಿಧಿ 370 ರದ್ದಾದ ನಂತರ ಜನರು ಅಭಿವೃದ್ಧಿಯನ್ನು ನೋಡುತ್ತಿದ್ದಾರೆ ಎಂದರು.
ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಲ್ಲಿ ಅಭಿವೃದ್ಧಿಯಾಗುತ್ತಿದೆ. 370ನೇ ವಿಧಿಯ ನೆಪದಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳ ಮಧ್ಯೆ ತಾರತಮ್ಯ ಮಾಡಲಾಗುತ್ತಿತ್ತು. ಈಗ ಅದೆಲ್ಲವನ್ನೂ ಸರಿದೂಗಿಸಲಾಗಿದೆ ಎಂದು ಭಾಗವತ್ ಹೇಳಿದರು.
2019ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತ್ತು. ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಲಾಗಿದ್ದ ವಿಶೇಷ ಹಕ್ಕುಗಳನ್ನು ತೆಗೆದುಹಾಕಿದ್ದು ಮಾತ್ರವಲ್ಲದೇ ಜಮ್ಮುಕಾಶ್ಮೀರ ರಾಜ್ಯವನ್ನು ವಿಭಜಿಸಿ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿತ್ತು.
ಇದನ್ನೂ ಓದಿ:ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಗೀಲಾನಿ ಮೊಮ್ಮಗ ಸರ್ಕಾರಿ ಕೆಲಸದಿಂದ ವಜಾ