ನಾಗ್ಪುರ (ಮಹಾರಾಷ್ಟ್ರ):ಇಲ್ಲಿನ ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಮಹಿಳೆಗೆ ಆಹ್ವಾನ ನೀಡಲಾಗಿದೆ. ಸಂಪ್ರದಾಯದಲ್ಲಿ ಬದಲಾವಣೆ ಮಾಡಿಕೊಂಡ ಆರ್‌ಎಸ್‌ಎಸ್ ಪರ್ವತಾರೋಹಿ ಸಂತೋಷ್ ಯಾದವ್ ಅವರನ್ನು ಅತಿಥಿಯಾಗಿ ಆಹ್ವಾನಿಸಿತ್ತು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಯುಧ ಪೂಜೆಗೆ ಚಾಲನೆ ನೀಡಿದರು. ಸಂತೋಷ್ ಯಾದವ್ ಅವರು ಪರ್ವತಾರೋಹಿಯಾಗಿದ್ದು, ಎರಡು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಳಿಕ ಮೋಹನ್ ಭಾಗವತ್ ಮಾತನಾಡಿ, ಜನಸಂಖ್ಯೆಯ ಸಮಗ್ರ ನೀತಿಗೆ ಕರೆ ನೀಡಿದ ಅವರು, ದೇಶದ ಎಲ್ಲ ಸಮುದಾಯದ ಜನರಿಗೂ ಈ ನೀತಿ ಅನ್ವಯಿಸಬೇಕು. ಜನಸಂಖ್ಯೆ ಹೆಚ್ಚಾದಷ್ಟೂ ಹೊರೆ ಹೆಚ್ಚಾಗುತ್ತದೆ. ಜನಸಂಖ್ಯೆಯನ್ನು ಸರಿಯಾಗಿ ಬಳಸಿಕೊಂಡು ಸಂಪನ್ಮೂಲ ರೂಪಿಸಬೇಕು. 50 ವರ್ಷಗಳ ನಂತರ ಎಷ್ಟು ಜನರಿಗೆ ಆಹಾರ ಮತ್ತು ಸೌಕರ್ಯ ಒದಗಿಸಬಹುದು ಎಂಬುದನ್ನು ನಾವು ಗುರಿ ಹಾಕಿಕೊಳ್ಳಬೇಕು ಎಂದು ಹೇಳಿದರು.