ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಖಂಡಿಸಿದೆ. ತಕ್ಷಣವೇ ಶಾಂತಿಯನ್ನು ಪುನಃಸ್ಥಾಪಿಸಲು ಸ್ಥಳೀಯ ಆಡಳಿತ, ಪೊಲೀಸ್, ಭದ್ರತಾ ಪಡೆಗಳು ಮತ್ತು ಕೇಂದ್ರದ ಏಜೆನ್ಸಿಗಳು ಸೇರಿದಂತೆ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈಶಾನ್ಯ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯ ಕ್ರಮಗಳ ಜೊತೆಗೆ ಹಿಂಸಾಚಾರದಿಂದಾಗಿ ನಿರಾಶ್ರಿತರಾದವರಿಗೆ ಪರಿಹಾರ ಸಾಮಗ್ರಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಜಾಗವಿಲ್ಲ ಎಂದು ಒತ್ತಿಹೇಳಿರುವ ಅವರು, ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾದ ವಿಶ್ವಾಸ ಕೊರತೆಯನ್ನು ಎರಡೂ ಕಡೆಯವರು ನಿವಾರಿಸಬೇಕು. ಶಾಂತಿಯನ್ನು ಮರುಸ್ಥಾಪಿಸಲು ಮಾತುಕತೆ ಆರಂಭಿಸಬೇಕೆಂದು ಹೇಳಿದ್ದಾರೆ.
ಪ್ರಸ್ತುತ ಅಸ್ತವ್ಯಸ್ತವಾಗಿರುವ ಮತ್ತು ಹಿಂಸಾತ್ಮಕ ಪರಿಸ್ಥಿತಿಯನ್ನು ಕೊನೆಗೊಳಿಸಲು ಮತ್ತು ಮಾನವ ಜೀವಗಳ ಸುರಕ್ಷತೆ ಮತ್ತು ಶಾಶ್ವತ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಉಪಕ್ರಮಗಳನ್ನು ತೆಗೆದುಕೊಳ್ಳುವಂತೆ ಮಣಿಪುರದ ನಾಗರಿಕ ಸಮಾಜ, ರಾಜಕೀಯ ಗುಂಪುಗಳು ಮತ್ತು ಸಾರ್ವಜನಿಕರಿಗೆ ಆರ್‌ಎಸ್‌ಎಸ್ ಮನವಿ ಮಾಡುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಕಳೆದ 45 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರ ಅತ್ಯಂತ ಕಳವಳಕಾರಿಯಾಗಿದೆ. ಮೇ 3ರಂದು ಲೈ ಹರೋಬಾ ಹಬ್ಬದ ಸಮಯದಲ್ಲಿ ಚುರಾಚಂದ್‌ಪುರದಲ್ಲಿ ಆಯೋಜಿಸಲಾದ ಪ್ರತಿಭಟನಾ ಮೆರವಣಿಗೆ ನಂತರ ಮಣಿಪುರದಲ್ಲಿ ಪ್ರಾರಂಭವಾದ ಹಿಂಸಾಚಾರ ಮತ್ತು ಅನಿಶ್ಚಿತತೆ ಖಂಡನೀಯ. ಶತಮಾನಗಳಿಂದ ಪರಸ್ಪರ ಸೌಹಾರ್ದತೆ ಮತ್ತು ಸಹಕಾರದೊಂದಿಗೆ ಶಾಂತಿಯುತ ಜೀವನ ನಡೆಸಲಾಗುತ್ತಿದೆ. ಆದರೆ, ನಂತರ ಭುಗಿಲೆದ್ದ ಅಶಾಂತಿ ಮತ್ತು ಹಿಂಸಾಚಾರವು ಇನ್ನೂ ನಿಲ್ಲದಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನೋವಿನ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಘವು ಮನವಿ ಮಾಡುತ್ತದೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳ ಜೊತೆಗೆ ಸ್ಥಳಾಂತರಗೊಂಡವರಿಗೆ ಪರಿಹಾರ ಸಾಮಗ್ರಿಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಬೇಕೆಂದು ಹೊಸಬಾಳೆ ಹೇಳಿದ್ದಾರೆ.
ಈ ಭೀಕರ ದುಃಖದ ಸಮಯದಲ್ಲಿ 50 ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸ್ಥಳಾಂತರಗೊಂಡ ಜನರು ಮತ್ತು ಇತರ ಸಂತ್ರಸ್ತರೊಂದಿಗೆ ಆರ್‌ಎಸ್‌ಎಸ್ ನಿಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆ ಮತ್ತು ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಆರ್‌ಎಸ್‌ಎಸ್ ಪರಿಗಣಿಸಿದೆ. ಶಾಂತಿಯುತ ವಾತಾವರಣದಲ್ಲಿ ಪರಸ್ಪರ ಮಾತುಕತೆ ಮತ್ತು ಸಹೋದರತ್ವದ ಅಭಿವ್ಯಕ್ತಿಯಿಂದ ಮಾತ್ರ ಯಾವುದೇ ಸಮಸ್ಯೆಯ ಪರಿಹಾರ ಸಾಧ್ಯ ಎಂದೂ ಸಂಘ ನಂಬುತ್ತದೆ. ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿರುವ ವಿಶ್ವಾಸದ ಕೊರತೆಯನ್ನು ನೀಗಿಸಲು ಆರ್‌ಎಸ್‌ಎಸ್ ಎಲ್ಲರಿಗೂ ಮನವಿ ಮಾಡುತ್ತದೆ. ಇದಕ್ಕೆ ಎರಡೂ ಸಮುದಾಯಗಳಿಂದ ಸಮಗ್ರ ಪ್ರಯತ್ನಗಳು ಬೇಕಾಗುತ್ತವೆ. ಮೇಟಿಸ್‌ಗಳಲ್ಲಿನ ಅಭದ್ರತೆ ಮತ್ತು ಅಸಹಾಯಕತೆಯ ಭಾವನೆ ಮತ್ತು ಕುಕಿ ಸಮುದಾಯದ ನಿಜವಾದ ಕಾಳಜಿಯನ್ನು ಏಕಕಾಲದಲ್ಲಿ ಪರಿಹರಿಸುವ ಮೂಲಕ ಇದನ್ನು ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಮತ್ತೊಂದೆಡೆ, ಆರ್‌ಎಸ್‌ಎಸ್‌ನ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, 45 ದಿನಗಳ ನಿರಂತರ ಹಿಂಸಾಚಾರದ ನಂತರ ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಆರ್‌ಎಸ್‌ಎಸ್ ಅಂತಿಮವಾಗಿ ಸಾರ್ವಜನಿಕರಿಗೆ ಮನವಿ ಮಾಡಿದೆ ಎಂದು ಹೇಳಿದೆ. ಆರ್‌ಎಸ್‌ಎಸ್‌ನ ಸುಪ್ರಸಿದ್ಧ ದ್ವಂದ್ವತೆಯು ಅದರ ವಿಭಜಕ ಸಿದ್ಧಾಂತ ಮತ್ತು ಧ್ರುವೀಕರಣದ ಚಟುವಟಿಕೆಗಳು ವೈವಿಧ್ಯಮಯ ಈಶಾನ್ಯದ ಸ್ವರೂಪವನ್ನು ಬದಲಾಯಿಸುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಅಲ್ಲದೇ, ಮಣಿಪುರದ ಬಗ್ಗೆ ಪ್ರಧಾನಿ ಏನಾದರೂ ಹೇಳಿ, ಏನಾದರೂ ಮಾಡಿ ಎಂದೂ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Mann ki Baat : ಮಣಿಪುರ ಹಿಂಸಾಚಾರ ಬಗ್ಗೆ ಪ್ರಧಾನಿ ಮೌನ ಪ್ರಶ್ನಿಸಿದ ಪ್ರತಿಪಕ್ಷಗಳು.. ರೇಡಿಯೋ ಒಡೆದು ಪ್ರತಿಭಟನೆ