ನವದೆಹಲಿ:ಕೋವಿಡ್-19 ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ಇಡೀ ರಾಷ್ಟ್ರವು ಯುದ್ಧೋಪಾದಿಯಲ್ಲಿ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂಥ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗ ಸಂಸ್ಥೆ, ಸ್ವಯಂಸೇವಕ ಸಂಘಟನೆಯಾದ ಸೇವಾ ಭಾರತಿ ಕೂಡ ಸಹಾಯಕ್ಕೆ ನಿಂತಿದ್ದು, ಸೋಂಕಿತ ರೋಗಿಗಳು ಮತ್ತು ಅವರ ರಕ್ತಸಂಬಂಧಿಗಳಿಗೆ ಅಗತ್ಯ ನೆರವು ನೀಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ, ಹಲವಾರು ಸಾಮಾಜಿಕ, ಧಾರ್ಮಿಕ, ಕೈಗಾರಿಕೆ ಮತ್ತು ಎನ್‌ಜಿಒಗಳನ್ನು ಒಳಗೊಂಡ ಕೋವಿಡ್ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಸೇವಾ ಭಾರತಿ ಸಂಘಟನೆಯು ಶನಿವಾರ ಪ್ರಾರಂಭಿಸಿತು. ಕೋವಿಡ್-19ಗೆ ಸಂಬಂಧಿಸಿದ ಎಲ್ಲ ರೀತಿಯ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಮತ್ತು ಅಗತ್ಯವಿರುವವರಿಗೆ ಅವುಗಳನ್ನು ಒದಗಿಸುವುದು ಈ ತಂಡದ ಉದ್ದೇಶವಾಗಿದೆ.
ಕಾರ್ಯಾಚರಣೆ ಪಡೆಯನ್ನು ವರ್ಚುವಲ್ ಸಮಾರಂಭದ ಮೂಲಕ ಉದ್ಘಾಟಿಸಲಾಯಿತು. ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಯಾಚರಣೆ ಪಡೆಯ ಸಂಚಾಲಕ ಹಾಗೂ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ (ನಿವೃತ್ತ), ಈ ಬಿಕ್ಕಟ್ಟಿನ ಮಧ್ಯೆ ಅಗತ್ಯವಿರುವವರಿಗೆ ಸೇವೆ ನೀಡುವುದರ ಜೊತೆಗೆ, ಈ ತಂಡವು ಆರೋಗ್ಯ ಸೇವೆಗಳು ಮತ್ತು ಇತರ ಸಂಬಂಧಿತ ವಿಷಯಗಳ ಸುಧಾರಣೆಗೆ ಸರ್ಕಾರಕ್ಕೆ ಅಗತ್ಯವಾದ ಸಲಹೆಗಳನ್ನು ನೀಡುತ್ತದೆ ಎಂದು ಹೇಳಿದರು.
ಇದಲ್ಲದೆ, ಆಮ್ಲಜನಕ ಸೌಲಭ್ಯಗಳೊಂದಿಗೆ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲು, ಆಮ್ಲಜನಕ ವ್ಯಾನ್‌ಗಳನ್ನು ಸಾಗಿಸಲು, ಆಯುರ್ವೇದ ಔಷಧಿಗಳನ್ನು ಜನರಿಗೆ ಮನೆ ಬಾಗಿಲಿಗೆ ತಲುಪಿಸಲು ಮತ್ತು ಈ ಸಾಂಕ್ರಾಮಿಕದ ಮಧ್ಯೆ ಮೃತಪಟ್ಟವರನ್ನು ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಸಹ ಈ ತಂಡ ಯೋಜಿಸಿದೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ, ಆರ್‌ಎಸ್‌ಎಸ್ ಮತ್ತು ಸೇವಾ ಭಾರತಿ 500 ಹಾಸಿಗೆಗಳ ಪ್ರತ್ಯೇಕ ಕೇಂದ್ರಗಳ ಉಪಕ್ರಮದೊಂದಿಗೆ, ಒಟ್ಟು 7 ಆಮ್ಲಜನಕ ವ್ಯಾನ್‌ಗಳು, ಆಮ್ಲಜನಕ ಹಾಸಿಗೆಗಳನ್ನು ಹೊಂದಿದ್ದು, 28,000 ಕುಟುಂಬಗಳಿಗೆ ಆಹಾರ ವಿತರಣೆ, 803 ಪ್ಲಾಸ್ಮಾ ದೇಣಿಗೆ ಮತ್ತು 1,300 ಸಿಟಿ ಸ್ಕ್ಯಾನ್‌ಗಳನ್ನು ನಡೆಸಿದೆ. ಒಟ್ಟು 1,200 ಸ್ವಯಂಸೇವಕರು ಮತ್ತು 130 ವೈದ್ಯರ ತಂಡಗಳು ಈ ಕಾರ್ಯಪಡೆಯ ಸಹಾಯವಾಣಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಇಲ್ಲಿಯವರೆಗೆ 88,000 ಕರೆಗಳು ಬಂದಿವೆ ಎಂದು ಜನರಲ್ ಸಿಂಗ್ ಮಾಹಿತಿ ನೀಡಿದರು.