ನವದೆಹಲಿ: ಇಂಧನ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ನಾಯಕರು ಸದಸದಲ್ಲಿ ಘೋಷಣೆ ಕೂಗಿ, ಗದ್ದಲ ಸೃಷ್ಟಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ಮುಂದೂಡಲಾಗಿದೆ.
ರಾಜ್ಯ ಸಭಾ ಕಲಾಪದ ವೇಳೆ ಗದ್ದಲ ಜನವರಿ 29 ರಿಂದ ಫೆಬ್ರವರಿ 13ರವರೆಗೆ ಮೊದಲ ಹಂತದ ಬಜೆಟ್ ಅಧಿವೇಶನ ನಡೆದಿತ್ತು. ಎರಡನೇ ಹಂತದ ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ಎರಡನೇ ಹಂತದ ಅಧಿವೇಶನದ ಮೊದಲ ದಿನವಾದ ಇಂದು ಸದಸ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿದವು. ಇಂಧನ ಬೆಲೆ ಏರಿಕೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಮೊದಲ ದಿನ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ಇಂಧನ ಬೆಲೆ ಏರಿಕೆ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ನೋಟಿಸ್ ಸಲ್ಲಿಸಿದ್ದಾರೆ. ಈ ಕುರಿತು ವಿಚಾರಣೆಯ ವೇಳೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಇನ್ನು ಪ್ರತಿಪಕ್ಷಗಳು ಘೋಷಣೆ ಕೂಗುವುದನ್ನು ಮುಂದುವರೆಸಿದ ಹಿನ್ನೆಲೆ ಕಲಾಪವನ್ನು ಮುಂದೂಡಲಾಯಿತು.
ಇನ್ನು ಕಲಾಪದ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಮಲ್ಲಿಕರ್ಜುನ್ ಖರ್ಗೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ಪ್ರತಿ ಲೀಟರ್‌ಗೆ 100 ರೂ. ಮತ್ತು 80 ರೂ. ಆಗಿದ್ದು, ಎಲ್‌ಪಿಜಿ ಬೆಲೆ ಕೂಡ ಏರಿಕೆಯಾಗಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.